ನಂಜನಗೂಡು: ಕಪಿಲಾ ನದಿಯಲ್ಲಿ ಮುಳುಗಿ ತುಮಕೂರಿನ ಮೂವರು ಅಯ್ಯಪ್ಪ ಭಕ್ತರ ಸಾವು
ಮೈಸೂರು: ಶ್ರೀಕಂಠೇಶ್ವರಸ್ವಾಮಿ ದೇವರ ದರ್ಶನಕ್ಕೆಂದು ನಂಜನಗೂಡಿಗೆ ಆಗಮಿಸಿದ್ದ ಅಯ್ಯಪ್ಪ ಭಕ್ತರು ನಗರದ ಹೆಜ್ಜಿಗೆ ಸೇತುವೆ ಬಳಿ ಕಪಿಲಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಮೂವರು ಮೃತಪಟ್ಟಿದ್ದಾರೆ.
ತುಮಕೂರು ತಾಲೂಕಿನ ನರುಗನಹಳ್ಳಿಯ ಗುಡ್ಡದ ರಂಗಯ್ಯನವರ ಪುತ್ರ ಗವಿರಂಗ (26), ಇದೇ ಗ್ರಾಮದ ರಾಕೇಶ್ (19) ಹಾಗೂ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಲ್ಲಗುಟ್ಟಹಳ್ಳಿಯ ಅಪ್ಪು (16) ಮೃತರು. ಗವಿರಂಗ ಟಿಟಿಪಿ ಕಾರ್ಖಾನೆ ನೌಕರರಾಗಿದ್ದು, ರಾಕೇಶ್ ಪ್ರಥಮ ಬಿ.ಎ, ಅಪ್ಪು ಎಸ್ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಜ.17ರಂದು ಸ್ವಗ್ರಾಮದಿಂದ 8 ಮಂದಿ ಶಬರಿಮಲೆಗೆ ತೆರಳಿ ದೇವರ ದರ್ಶನ ಪಡೆದು ಶುಕ್ರವಾರ ಊರಿಗೆ ಹಿಂದಿರುಗುತ್ತಿದ್ದಾಗ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆಯುವ ಮುನ್ನ ಕಪಿಲಾ ನದಿಯಲ್ಲಿ ಸ್ನಾನ ಮಾಡಲು ಹೆಜ್ಜಿಗೆ ಸೇತುವೆ ತಳ ಭಾಗದಲ್ಲಿ ಎಲ್ಲರೂ ನೀರಿಗಿಳಿದಿದ್ದಾರೆ.
ಇಲ್ಲಿ ನೀರಿನ ಹರಿವು ತೀವ್ರವಾಗಿದ್ದು, ಸೆಳೆತಕ್ಕೆ ಸಿಲುಕಿ ಗವಿರಂಗ, ರಾಕೇಶ್, ಅಪ್ಪು ಹಾಗೂ ರಾಮಕೃಷ್ಣ ಕೊಚ್ಚಿಹೋಗಿದ್ದಾರೆ. ಈ ಸಂದರ್ಭ ಸ್ಥಳೀಯ ಈಜುಗಾರರ ನೆರವಿನೊಂದಿಗೆ ರಾಮಕೃಷ್ಣ ಎಂಬುವವರನ್ನು ರಕ್ಷಿಸಲಾಯಿತಾದರೂ ಉಳಿದ ಮೂವರು ಈಜುಬಾರದೇ ಇರುವುದರಿಂದ ಮೃತಪಟ್ಟಿದ್ದಾರೆ.












Click it and Unblock the Notifications