ಚಾಮುಂಡಿಬೆಟ್ಟಕ್ಕೆ ಲಗ್ಗೆಯಿಟ್ಟವರು ಬಾಗಿಲು ತೆರೆಯದೆ ಪರದಾಡಿದರು!
ಮೈಸೂರು, ಅಕ್ಟೋಬರ್ 03; ವಾರಪೂರ್ತಿ ತಮ್ಮದೇ ಹತ್ತು ಹಲವು ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದವರು ವಾರಾಂತ್ಯದ ಭಾನುವಾರ ಮೈಕೊಡವಿಕೊಂಡು ಮುಂಜಾನೆಯೇ ಚಾಮುಂಡಿಬೆಟ್ಟದತ್ತ ಲಗ್ಗೆಯಿಟ್ಟಿದ್ದರಿಂದ ಜನಸಾಗರ ಸೃಷ್ಟಿಯಾಗಿತ್ತು.
ಮುಂಜಾನೆಯ ಚುಮು ಚುಮು ಬೆಳಕಿನಲ್ಲಿ ಬೀಸುವ ತಂಗಾಳಿ ನಡುವೆ ಒಂದೊಂದೇ ಮೆಟ್ಟಿಲೇರುತ್ತಾ ಹಸಿರ ಸಿರಿಯ ಸೊಬಗು ಸವಿಯುತ್ತಾ ನಿರಾಳರಾಗಲು ಜನ ಗುಂಪು ಗುಂಪಾಗಿ ಬಂದಿದ್ದರಿಂದ ಚಾಮುಂಡಿಬೆಟ್ಟದ ಪಾದದ ಬಳಿ ಜನಜಾತ್ರೆಯೇ ನೆರೆದಂತೆ ಗೋಚರಿಸುತ್ತಿತ್ತು.
ವಾರಾಂತ್ಯದ ಶನಿವಾರ ಮತ್ತು ಭಾನುವಾರ ಚಾಮುಂಡಿಬೆಟ್ಟಕ್ಕೆ ಜನ ತಂಡೋಪ ತಂಡವಾಗಿ ಆಗಮಿಸುವುದು ಹೊಸತೇನಲ್ಲ. ಆದರೆ ಕೊರೊನಾ ಕಾರಣದಿಂದ ಮಾರ್ಚ್ ತಿಂಗಳಿನಿಂದಲೇ ಚಾಮುಂಡಿಬೆಟ್ಟವನ್ನೇರದಂತೆ ಪಾದದ ಬಳಿಯಿರುವ ದ್ವಾರವನ್ನು ಬಂದ್ ಮಾಡಲಾಗಿತ್ತು. ಒಂದಷ್ಟು ತಿಂಗಳು ನಿರ್ಬಂಧ ಹೇರಲಾಗಿದ್ದರಿಂದ ಹೆಚ್ಚಿನ ಜನ ಮೆಟ್ಟಿಲೇರಲು ಬರುತ್ತಿರಲಿಲ್ಲ.
ತದ ನಂತರ ಒಂದಷ್ಟು ಜನ ಮೆಟ್ಟಿಲೇರುವ ಸಲುವಾಗಿ ಬಂದರೂ ಬಾಗಿಲು ತೆರೆಯದ ಕಾರಣ ಬೇಲಿಯ ಬದಿಯಲ್ಲಿ ನುಸುಳಿಕೊಂಡು ಸಾಗುವಂತಾಗಿತ್ತು. ಈಗ ಮೆಟ್ಟಿಲೇರಲು ಯಾವುದೇ ನಿರ್ಬಂಧವಿಲ್ಲವಾದರೂ ದ್ವಾರದ ಬಾಗಿಲಿಗೆ ಹಾಕಿರುವ ಬೀಗವನ್ನು ತೆರೆಯದ ಕಾರಣದಿಂದ ಜನ ಬೇಲಿಯ ಮೂಲಕ ನುಸುಳಿಕೊಂಡೇ ಸಾಗುವಂತಾಗಿದೆಯಲ್ಲದೆ, ಜನಪರದಾಡುವಂತಾಗಿದೆ. ಈ ಕುರಿತಂತೆ ಸಂಬಂಧಪಟ್ಟವರು ಗಾಢ ನಿದ್ದೆಗೆ ಜಾರಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಾಯುವಿಹಾರಿಗಳಿಗೆ ಆಕ್ಸಿಜನ್ ಕಣಜ
ಮುಂಜಾನೆ ವಾಯುವಿಹಾರಕ್ಕೆ ಬರುವ ಮೈಸೂರು ನಗರ ವಾಸಿಗಳಿಗೆ ಚಾಮುಂಡಿಬೆಟ್ಟ ಆಕ್ಸಿಜನ್ ಕಣಜ ಇದ್ದಂತೆ. ಹೀಗಾಗಿ ಒಂದೊಳ್ಳೆಯ ಗಾಳಿ, ಮಾನಸಿಕ ನೆಮ್ಮದಿ, ಶರೀರಕ್ಕೆ ವ್ಯಾಯಾಮ, ಕಣ್ಣಿಗೆ ಹಸಿರಿನ ತಂಪು ಪಡೆಯಲು ಬರುವುದು ಸಹಜವಾಗಿದೆ. ನಿತ್ಯ ಸಾವಿರ ಮೆಟ್ಟಿಲೇರಿ ಚಾಮುಂಡಿತಾಯಿಯ ದರ್ಶನ ಮಾಡುವವರ ಸಂಖ್ಯೆ ನೂರಾರಿದೆ. ಕಳೆದ ಮೂವತೈದು ವರ್ಷಗಳಿಂದಲೂ ಬೆಟ್ಟವೇರುವವರಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಮೆಟ್ಟಿಲೇರಿ ಚಾಮುಂಡಿದೇವಸ್ಥಾನಕ್ಕೆ ತೆರಳಿ ದೇವರಿಗೆ ನಮಿಸಿ ಹಿಂತಿರುಗುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ಇವರಲ್ಲಿ ಯುವಕ, ಯುವತಿಯರು, ಪುರುಷರು, ವೃದ್ಧರು, ಮಹಿಳೆಯರು ಹೀಗೆ ಎಲ್ಲರೂ ಇದ್ದು, ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೆಟ್ಟಿಲೇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಬೆಟ್ಟವೇರುವುದರಿಂದ ಬಿಪಿ ಶುಗರ್ ಬರಲ್ಲ
ಪ್ರತಿದಿನ ಚಾಮುಂಡಿಬೆಟ್ಟ ಹತ್ತುವುದರಿಂದ ಬಿಪಿ, ಶುಗರ್, ನೆಗಡಿ ದೂರವಾಗುತ್ತದೆಯಂತೆ. ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ವೃದ್ಧಿಸುತ್ತದೆಯಂತೆ. ಇನ್ನು ದಿನಾಲೂ ಮೆಟ್ಟಿಲೇರಿದರೆ ಮಂಡಿಚಿಪ್ಪು ಸವೆಯುತ್ತದೆ ಎಂಬ ಮಾತನ್ನು ಇವರಾರು ಒಪ್ಪುವುದಿಲ್ಲ. ವಯಸ್ಸಾದ ಮೇಲೆ ಇದು ಸಹಜ. ಬೆಟ್ಟವೇರಿದಾಕ್ಷಣ ಮಂಡಿ ಚಿಪ್ಪು ಸವೆಯುತ್ತದೆ ಎನ್ನುವುದು ಸುಳ್ಳು ನಾವು ಹತ್ತಾರು ವರ್ಷಗಳಿಂದ ಹತ್ತುತ್ತಿದ್ದು ಅಂತಹ ಸಮಸ್ಯೆ ಎದುರಾಗಿಲ್ಲ ಎಂದು ಹಲವರು ಅಭಿಪ್ರಾಯಪಡುತ್ತಾರೆ.
ವಾರಪೂರ್ತಿ ತಮ್ಮದೇ ಕೆಲಸ ಕಾರ್ಯಗಳ ಜಂಜಾಟದಲ್ಲಿದ್ದವರು ಭಾನುವಾರ ತಮ್ಮ ಕುಟುಂಬ ಅಥವಾ ಸಹದ್ಯೋಗಿಗಳೊಂದಿಗೆ ಬಂದು ನಿಧಾನವಾಗಿ ಒಂದೊಂದೇ ಮೆಟ್ಟಿಲೇರಿ, ಇಲ್ಲಿನ ನಂದಿ ಹಾಗೂ ವ್ಯೂ ಪಾಯಿಂಟ್ ಗಳಲ್ಲಿ ಮೈಸೂರು ನಗರ ಸೇರಿದಂತೆ ದೂರದ ಬೆಟ್ಟಗುಡ್ಡಗಳ ಸುಂದರ ವಿಹಂಗಮ ನೋಟಗಳನ್ನು ನೋಡಿ ಬಳಿಕ ಚಾಮುಂಡೇಶ್ವರಿಯ ದರ್ಶನ ಮಾಡಿ ಮನೆಯ ಹಾದಿ ಹಿಡಿಯುತ್ತಾರೆ.

ಕಲ್ಪನೆಗೆ ನಿಲುಕದ ಹತ್ತಾರು ನೋಟಗಳು
ಈಗಂತೂ ವರುಣನ ಕೃಪೆಯಿಂದಾಗಿ ಇಡೀ ಬೆಟ್ಟ ಹಸಿರಿನ ಸೀರೆಯುಟ್ಟು ಮುಡಿಗೆ ಬಗೆ, ಬಗೆಯ ಹೂ ಮುಡಿದು ನಿಂತ ಚೆಲುವೆ ಬೀಸುವ ತಂಗಾಳಿಗೆ, ಹಕ್ಕಿಗಳ ಚಿಲಿಪಿಲಿ ನಾದಕ್ಕೆ ತಲೆತೂಗುತ್ತಿರುವಂತೆ ಭಾಸವಾಗುತ್ತಿದೆ. ಇಡೀ ಬೆಟ್ಟವನ್ನು ತನ್ನ ಮುಷ್ಠಿಯೊಳಗಿಟ್ಟು ಹೊಯ್ದಾಡುವ ಮಂಜು ರವಿಯ ಕಿರಣಗಳ ಸ್ಪರ್ಶಕ್ಕೆ ನೆಗೆದು ಓಡುವುದನ್ನು ನೋಡಿ ತಲೆಬಾಗಿ ನಗುವ ಗಿಡ ಮರಗಳು... ಹೀಗೆ ಕಲ್ಪನೆಗೆ ನಿಲುಕದ ಹತ್ತಾರು ನೋಟಗಳು ಲಭ್ಯವಾಗುತ್ತವೆ. ಇನ್ನು ಚಾಮುಂಡೇಶ್ವರಿಯನ್ನು ಭಕ್ತಿಯಿಂದ ನೆನೆಯುತ್ತಾ ಅರಸಿನ, ಕುಂಕುಮ, ಹೂ, ಕರ್ಪೂರ ಹಚ್ಚುವವರು, ಬರಿಗಾಲಲ್ಲಿ ನಡೆಯುವವರು, ಮಂಡಿಯೂರಿ ಬೆಟ್ಟ ಹತ್ತುವವರು ಹೀಗೆ ಹಲವು ಭಕ್ತರು ಕಾಣಸಿಗುತ್ತಾರೆ.

ನಾಯಿ ಕರೆತರುವುದನ್ನು ನಿರ್ಬಂಧಿಸಬೇಕು
ಇದೀಗ ಚಾಮುಂಡಿಬೆಟ್ಟವನ್ನೇರುವ ಹಲವು ಮಂದಿ ತಮ್ಮ ಕೆಲವೊಂದು ಒತ್ತಾಯಗಳನ್ನು ಮಾಡುತ್ತಿದ್ದಾರೆ. ಅದೇನೆಂದರೆ ಪಾದದ ಬಳಿ ಮೆಟ್ಟಿಲೇರಲು ತೆರಳುವವರಿಗೆ ಅನುಕೂಲವಾಗುವಂತೆ ಪಾದದ ಬಳಿಯಿರುವ ದ್ವಾರದ ಬಾಗಿಲು ತೆರೆಯಬೇಕು, ಬೆಟ್ಟವೇರಲು ಬರುವವರು ತಮ್ಮೊಂದಿಗೆ ನಾಯಿಗಳನ್ನು ಕರೆದುಕೊಂಡು ಬರುವುದನ್ನು ನಿರ್ಬಂಧಿಸಬೇಕು. ಏಕೆಂದರೆ ನಾಯಿಗಳು ಮೆಟ್ಟಿಲಲ್ಲಿ ಮಲಮೂತ್ರ ವಿಸರ್ಜಿಸುವುದರಿಂದ ಮೆಟ್ಟಿಲಿಗೆ ಪೂಜೆ ಸಲ್ಲಿಸುವುದಕ್ಕೆ ಕುಂಕುಮ ಹಚ್ಚುವುದಕ್ಕೆ ತೊಂದರೆಯಾಗುತ್ತದೆ. ಜತೆಗೆ ಅಸಹ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications