'ಮೊಬೈಲ್‌ಗೆ ಮಾರು ಹೋಗಿ ಕುಂಠಿತಗೊಂಡ ವಿದ್ಯಾರ್ಥಿಗಳ ಆಲೋಚನಾ ಶಕ್ತಿ'
ಮೈಸೂರು, ನವೆಂಬರ್ 07: ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಸರಿಯಾದ ದಾರಿ ಆರಿಸಲು ಸಾಧ್ಯವಾಗದೆ ಗೊಂದಲಕ್ಕೀಡಾಗಿ ಕೃತಕ ಬುದ್ದಿಮತ್ತೆ ಹಾಗೂ ಮೊಬೈಲ್‌ಗೆ ಮಾರು ಹೋಗಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಕುಂಠಿತಗೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಶರಣಪ್ಪ ವಿ.ಹಲ್ಸೆ ಕಳವಳ ವ್ಯಕ್ತಪಡಿಸಿದ್ದಾರೆ.
ಗುರುವಾರ ನ್ಯಾಷನಲ್ ಆಂಟಿ ಡುಪ್ಲಿಕೇಷನ್ ಬ್ಯೂರೋ ನವದೆಹಲಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಆರ್ಟ್ ಅಂಡ್ ಮೈಂಡ್ ಫೆಸ್ಟ್ 2ಕೆ24 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜ ಪರಿವರ್ತಿಸಿವುದು ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಕಿಂಗ್ ಮೇಕರ್ ಆಗಿ ಮಾಡಿದಾಗ ಸಮಾಜವನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಾನೆ. ಹೀಗಾಗಿ ನಿಮ್ಮ ತಂದೆ-ತಾಯಿ ಗುರು ಹಿರಿಯರು ಹಾಗೂ ಸಮಾಜವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಇಂತಹ ಕಾರ್ಯಕ್ರಮದಲ್ಲಿ ಹಲವಾರು ಪರಿಣಿತರು ಹಾಗೂ ತಜ್ಞರು ಮಾತನಾಡಿದಾಗ ಅದನ್ನು ವಿದ್ಯಾರ್ಥಿಗಳು ಕೂಲಂಕುಷವಾಗಿ ಗ್ರಹಿಸಿ ನಿಮ್ಮ ಆಲೋಚನಾ ಶಕ್ತಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕು. ಅದರಿಂದ ನಿಮ್ಮ ಅರಿವೇ ನಿಮ್ಮ ಗುರುವು ಎಂದು ಬಸವಣ್ಣನವರ ತತ್ವ ಸ್ಮರಿಸಿದರು. ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಲ್ಲವನ್ನು ಗ್ರಹಿಸಿಕೊಂಡು ನಿಮ್ಮ ಗುರಿ ತಲುಪಬೇಕು ನಿಮ್ಮ ನೈತಿಕತೆಯನ್ನು ಇಂದಿಗೂ ಬಿಡಬಾರದು. ಈ ದೇಶದಲ್ಲಿ ಅನೇಕ ಮಹನೀಯರ ಆದರ್ಶಗಳನ್ನು ಪಾಲಿಸಿಕೊಂಡು ಹೋಗಬೇಕು ಎಂದು ಆಶಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್ ಡೀನ್ ಡಾ.ಲಕ್ಷ್ಮಿ.ಎನ್ ಮಾತನಾಡಿ, ತಂತ್ರಜ್ಞಾನ ಮುಂದುವರೆದಂತೆ ದೇಶದಲ್ಲಿ ಜಾಗತೀಕರಣ, ತಂತ್ರಜ್ಞಾನದ ಬದಲಾವಣೆಯ ಜತೆಗೆ ಡಿಜಿಟಲೀಕರಣವಾಗುತ್ತಿದ್ದು, ಇದರೊಟ್ಟಿಗೆ ಶಿಕ್ಷಣ ಕೂಡಾ ಅತಿ ವೇಗವಾಗಿ ಮುಂದುವರಿಯುತ್ತಿವುದನ್ನು ನಾವು ಇಂದು ನೋಡಬಹುದು ಎಂದು ಹೇಳಿದರು.
ಪ್ರಾಚೀನ ಕಾಲಘಟ್ಟದಲ್ಲಿ ಕೇವಲ ಹಳೇ ಕಾಲದ ಸಾಂಪ್ರದಾಯಿಕ ಆಟಗಳಾದ ಕೋಕೋ, ಕಬಡ್ಡಿ, ಮರಕೋತಿ ಆಟ ಮತ್ತು ರಂಗೋಲಿ ಬಿಡಿಸುವಿಕೆಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಇಂದು ಶಾಲಾ ಕಾಲೇಜುಗಳಲ್ಲಿ ವೈವಿಧ್ಯತೆಯಲ್ಲಿ ಏಕತೆ ಮೂಡಿಸುವಂತಹ ವಿವಿಧ ರೀತಿಯ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಲ್ಲಿ ಸೃಜನಾತ್ಮಕ ಬೆಳವಣಿಗೆಗೆ ಮುನ್ನುಡಿಯಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಲ್ಲಿ ನಲಿ-ಕಲಿ ಎಂದರೆ ಮಗು ಆಡುತ್ತಾ-ನಲಿಯುತ್ತ ಕಲಿಯಬೇಕು. ಬಿ.ಇಡಿ ನಲ್ಲಿ ಕಲೆ ಮತ್ತು ಸಾಹಿತ್ಯ, ನಾಟಕ ಮತ್ತು ಶಿಕ್ಷಣ ಎಂಬ ಪಠ್ಯ ಪುಸ್ತಕವನ್ನು ರೂಪಿಸಿ ಶಾಲಾ ಕಾಲೇಜಿನ ಪ್ರತಿಯೊಬ್ಬ ಶಿಕ್ಷಕರು ಅದನ್ನು ಕಡ್ಡಾಯವಾಗಿ ಓದಿ ಶಿಕ್ಷಣದ ಜತೆಗೆ ನಾಟಕವನ್ನು ಹೇಗೆ ಒಂದುಗೂಡಿಸಬೇಕು ಎಂಬ ನಿಟ್ಟಿನಲ್ಲಿ ಕಲೆ ಮತ್ತು ಸಾಹಿತ್ಯವನ್ನು ಸಹ ಪಠ್ಯ ಚಟುವಟಿಕೆಯಾಗಿ ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ಎಂಟರ್ ಪ್ರಿನರ್ಶಿಪ್-ಬಿಸಿನೆಸ್ ಸ್ಕೂಲ್ ನಿರ್ದೇಶಕಿ ಹಾಗೂ ಪ್ರಾಂಶುಪಾಲೆ ಡಾ.ಕೆ.ಅಪರ್ಣಾ ರಾವ್, ಪ್ರೊ.ವೆಂಕಟರಮಣ ಶೆಟ್ಟಿ, ನ್ಯಾಷನಲ್ ಆಂಟಿ ಡುಪ್ಲಿಕೇಷನ್ ಬ್ಯೂರೋ ರಾಷ್ಟ್ರೀಯ ಉಪಾಧ್ಯಕ್ಷ ಸಿ.ವಿ.ಶ್ರೀನಾಥ್ ಶೆಟ್ಟಿ ಹಾಗೂ ಪತ್ರಿಕೋದ್ಯಮದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಸಮೂಹ ಸಂವಹನದ ಅಧ್ಯಕ್ಷ ಡಾ.ಶೈಲೇಶ್ ರಾಜ್ ಅರಸ್ ಜಿ.ಬಿ ಇದ್ದರು.












Click it and Unblock the Notifications