ಆರು ತಿಂಗಳುಗಳ ಬಳಿಕ ಬೆಳಕು ಕಂಡ ಮೈಸೂರು ಹೊರವರ್ತುಲ ರಸ್ತೆ!
ಮೈಸೂರು, ಮೇ 8: ಮೈಸೂರಿನ ಹೊರವರ್ತುಲ ರಸ್ತೆ ಮತ್ತೆ ಬೆಳಕು ಕಂಡಿದೆ. ಹೌದು ವಿದ್ಯುತ್ ಬಾಕಿ ಪಾವತಿ ಮಾಡದೇ ಇದ್ದುದರಿಂದ ಕಳೆದ ನವೆಂಬರ್ ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರಿಂದ ಹೊರ ವರ್ತುಲ ರಸ್ತೆ ಕತ್ತಲಲ್ಲಿ ಇತ್ತು. ಇದೀಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರ ಸೂಚನೆ ಮೇರೆಗೆ ಮೈಸೂರಿನ ಹೊರವರ್ತುಲ ರಸ್ತೆ ಮತ್ತೆ ಬೆಳಕು ಕಂಡಿದೆ.
ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿದ್ದರಿಂದ ಹೊರ ವರ್ತುಲ ರಸ್ತೆಯ ವಿದ್ಯುತ್ ದೀಪಗಳಿಗೆ ಕಳೆದ ನವೆಂಬರ್ ನಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಇದರಿಂದ ರಾತ್ರಿ ವೇಳೆ ಈ ರಸ್ತೆಯಲ್ಲಿ ಕತ್ತಲೆ ಆವರಿಸಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿತ್ತು.
ಗುರುವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಮುಡಾ ಸಭೆ ನಡೆಸಿದ ವೇಳೆ ಈ ಸಮಸ್ಯೆ ಗಮನಕ್ಕೆ ಬಂದಿತ್ತು. ಬಾಕಿ ಇರುವ ಸುಮಾರು 1.5 ಕೋಟಿ ವಿದ್ಯುತ್ ಬಿಲ್ಲನ್ನು ಪಾವತಿಸುವಂತೆ ಸಚಿವದ್ವಯರು ಸೂಚನೆ ನೀಡಿದ್ದರು. ಅದೇ ರೀತಿ ತಕ್ಷಣವೇ ವಿದ್ಯುತ್ ಸಂಪರ್ಕ ನೀಡುವಂತೆ ಚೆಸ್ಕಾಂ ಅಧಿಕಾರಿಗಳಿಗೂ ಸೂಚನೆ ನೀಡಿದ್ದರು.
ಸರ್ಕಾರ ವಿದ್ಯುತ್ ಬಾಕಿ ಪಾವತಿ ಮಾಡಿದ್ದರ ಫಲವಾಗಿ ಸುಮಾರು 44 ಕಿ.ಮೀ.ಉದ್ದದ ಮೈಸೂರು ಹೊರವರ್ತುಲ ರಸ್ತೆ ಈಗ ಬೆಳಕು ಕಂಡಿದೆ.