ಸಂಕಷ್ಟದಲ್ಲಿ ಮೈಸೂರಿನ ಟಾಂಗಾವಾಲಾಗಳ ಬದುಕಿನ ಬಂಡಿ!
ಮೈಸೂರು, ಸೆಪ್ಟೆಂಬರ್ 18: ಮೈಸೂರು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮೈಸೂರು ದಸರಾ, ಮೈಸೂರು ಪಾಕ್, ಮೈಸೂರು ರೇಷ್ಮೆ, ಹಾಗೆಯೇ ಮೈಸೂರು ಎಂದರೆ ತಕ್ಷಣಕ್ಕೆ ಅರಿಯುವುದೆಂದರೆ ಟ್ರಾಫಿಕ್ ಮಧ್ಯೆ ಟಕ್ ಟಕ್ ಎಂದು ಶಬ್ದ ಮಾಡಿಕೊಂಡು ಓಡಿಕೊಂಡು ಬರುವ ಟಾಂಗಾ ಗಾಡಿಗಳು.
ನಿಮಗೆ ದೈನಂದಿನ ಆಟೋ, ಬಸ್, ಕಾರ್, ಬೈಕ್ ಮುಂತಾದ ವಾಹನಗಳಲ್ಲಿ ಓಡಾಟ ಮಾಡಿ ಬೇಸರವೆನಿಸಿದೆಯೇ ಹಾಗಾದರೆ ಬನ್ನಿ. ನಿಮ್ಮ ಬೇಸರವನ್ನು ಕಳೆದುಕೊಳ್ಳಲು, ವಾಹನದ ಸದ್ದಿನ ಜಂಜಾಟವಿಲ್ಲದೆ ನಗರಕ್ಕೊಂದು ಸುತ್ತು ಹೊಡೆಯೋಣ. ಇದು ಕಾಲ್ನಡಿಗೆಯಿಂದಲ್ಲ. ಬದಲಿಗೆ ರಾಜ ಗಾಂಭೀರ್ಯ ಹೊಂದಿರುವ ಟಾಂಗಾ ಗಾಡಿಯಲ್ಲಿ!
ಲಗಾಮು ಹಿಡಿದು, ಟಾಂಗಾವಾಲ ಹೇಳಿದ್ದೇ ತಡ ಕುದುರೆ ಹೆಜ್ಜೆ ಹಾಕುತ್ತಿತ್ತು. ಕುದುರೆಯ ಟುಕು ಟುಕು ಹೆಜ್ಜೆಯ ಸದ್ದಿನ ಲಯದೊಂದಿಗೆ ಗಾಡಿಯ ಕುಲುಕಾಟದ ಪಯಣ ಪ್ರಯಾಣಿಕರಿಗೆ ಬಲು ಮೋಜಿನ ಸಂಗತಿಯಾಗಿತ್ತು.
ಮೈಸೂರು ದಸರಾ ಎಂದರೆ ಸಾಕು ಇಡೀ ನಾಡಿಗೆ ಹಬ್ಬ. ಅದರಲ್ಲಿ ಮುಖ್ಯವಾಗಿ ಟಾಂಗಾ ಓಡಿಸುವವರಿಗಂತು ಮನೆಹಬ್ಬ. ಟ್ರಾಫಿಕ್ ಮಧ್ಯೆ ಗಾಡಿಯನ್ನು ಓಡಿಸುವಂತಿಲ್ಲ, ಪ್ರೇಕ್ಷಣೀಯ ಸ್ಥಳಗಳಲ್ಲಿ ಗಾಡಿಗಳನ್ನು ನಿಲ್ಲಿಸುವಂತಿಲ್ಲ ಎಂದು ಯಾರು ಸಹ ಆಜ್ಞೆ ಮಾಡುವಂತಿಲ್ಲ. ಏಕೆಂದರೆ ಆಗ ಪ್ರವಾಸಿಗರ ಮೊದಲನೆ ಆಯ್ಕೆಯೇ ಟಾಂಗಾದಲ್ಲೊಂದು ನಗರ ಸುತ್ತು.
ಆದರೆ ಅದೇ ಟಾಂಗಾವಾಲಗಳು ಇಂದು ಬೆಳಿಗ್ಗೆಯಿಂದ ಸಂಜೆ ತನಕ ಕಾದರೂ ಯಾರೊಬ್ಬ ಪ್ರಯಾಣಿಕನೂ ಬಾರದೆ ಬರಿಗೈಯಲ್ಲಿ ಕುದುರೆ ಗಾಡಿಯನ್ನು ಓಡಿಸಿಕೊಂಡು ಮನೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.

ಟಾಂಗಾ ಗಾಡಿಯ ಹಿಂದಿದೆ ವಿಶೇಷ ಕಥೆ
ನಗರ ಹಾಗೂ ಗ್ರಾಮೀಣ ಭಾಗದ ಜನರ ಸಾರಿಗೆ ವ್ಯವಸ್ಥೆಯ ಅಂಗವಾಗಿದ್ದ ಟಾಂಗಾ ಗಾಡಿಗಳನ್ನು ಇಂದು ಕೇಳುವವರೇ ಇಲ್ಲದಂತಾಗಿದೆ. ವಾಹನ ಸೌಲಭ್ಯ ಇಲ್ಲದ ದಿನಗಳಲ್ಲಿ ಟಾಂಗಾ ಗಾಡಿಯೇ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಧನವಾಗಿತ್ತು. ಈ ಕಾಲ ಬದಲಾಗಿದ್ದು, ಆಧುನಿಕತೆಯ ಅಬ್ಬರದಲ್ಲಿ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಹೀಗಾಗಿ ಟಾಂಗಾ ಗಾಡಿಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಇದನ್ನೆ ನಂಬಿ ಬದುಕುತ್ತಿರುವ ಟಾಂಗಾವಾಲಗಳ ಬದುಕು ಅತಂತ್ರದಲ್ಲಿದೆ.
'ಈಗ ಟಾಂಗಾ ನಿಲ್ದಾಣದ ಸಮೀಪ ಕಾರು, ಅಟೊ, ಟಾಟಾ ಏಸ್, ಸರ್ಕಾರಿ ಹಾಗೂ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಪಾದನೆ ತೀರಾ ಕಡಿಮೆ ಆಗಿದೆ. ದುಡಿದ ಹಣದಲ್ಲಿ ಅರ್ಧ ಸಂಪಾದನೆಯನ್ನು ಕುದುರೆಗಳಿಗೆ ಖರ್ಚು ಮಾಡುವುದರಿಂದ ಸಂಸಾರ ನಿರ್ವಹಣೆ ದುಸ್ತರವಾಗಿದೆ. ದಿನ ಬಳಕೆ ವಸ್ತುಗಳ ಬೆಲೆಯಲ್ಲಿ ಆಗುವ ಪರಿಷ್ಕರಣೆ, ಖಾಸಗಿ ಶಾಲಾ, ಕಾಲೇಜುಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ಮಕ್ಕಳನ್ನು ಓದಿಸುವುದೇ ಕಷ್ಟವಾಗಿದೆ' ಎಂಬುದು ಟಾಂಗಾ ವಾಲಗಳ ಅಳಲು.

ಬೀದಿಗೆ ಬಿದ್ದಿದೆ ಟಾಂಗಾವಾಲಾಗಳ ಜೀವನ
ಮೈಸೂರು ನಗರದಲ್ಲಿ 5 ವರ್ಷಕ್ಕಿಂತ ಮುಂಚೆ 600ಕ್ಕೂ ಹೆಚ್ಚು ಟಾಂಗಾಗಾಡಿಗಳು ಓಡುತ್ತಿದ್ದವಲ್ಲದೆ ಸುಮಾರು 500 ಕುಟುಂಬಗಳನ್ನು ಈ ಕಾಯಕ ಪೋಷಿಸುತ್ತಿತ್ತು. ಆದರೆ ಇಂದು ಟಾಂಗಾ ಗಾಡಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿ ಕೇವಲ 100 ಟಾಂಗಾಗಾಡಿಗಳನ್ನು ಇಟ್ಟುಕೊಂಡಿರುವ 100 ಕುಟುಂಬಗಳು ಮಾತ್ರ ಇವೆ. ಕಾರಣ ಪ್ರಯಾಣಿಕರ ಕೊರತೆ.
"ಇಂತಹ ಪರಿಸ್ಥಿತಿಯಲ್ಲಿ ಟಾಂಗಾ ಗಾಡಿ ಓಡಿಸಿ ಬದುಕಿನ ಬಂಡಿ ಉಳಿಸುವುದು ಅಸಾಧ್ಯ ಆದ್ದರಿಂದ ಈ ಕೆಲಸವನ್ನು ಬಿಟ್ಟು ಬಿಡುತ್ತೇನೆ!" ಎಂಬ ಬೇಸರದ ಮಾತನ್ನು 25 ವರ್ಷಗಳಿಂದ ಟಾಂಗಾ ಗಾಡಿಯನ್ನು ಓಡಿಸುತ್ತಿರುವ ರಾಜಾಸಾಬ್ ಹೇಳುತ್ತಿದ್ದಾರೆ. ಅನೇಕ ಜನರು ಈ ಟಾಂಗಾ ಗಾಡಿಯ ದುಡಿಮೆಯಲ್ಲಿ ಮನೆ ಸಾಗಿಸಲು ಕಷ್ಟ ಎಂದು ಈ ವೃತ್ತಿಯನ್ನು ಬಿಟ್ಟು ಕೂಲಿ ಕೆಲಸ, ಆಟೋ ಚಾಲಕ ವೃತ್ತಿ ಸೇರಿದಂತೆ ಅನೇಕ ಬೇರೆ ಬೇರೆ ಕಾಯಕವನ್ನು ಆರಿಸಿಕೊಳ್ಳುತ್ತಿದ್ದಾರೆ.
ಅಂದಿನ ದಿನಗಳಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅಂದೊಂದು ಪ್ರತಿಷ್ಟೆಯ ಸಂಕೇತವಾಗಿತ್ತು. ದೂರದ ಊರುಗಳಿಗೆ ತೆರಳಬೇಕಾಗಿದ್ದರೆ ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗ ಬೇಕಾಗಿತ್ತು.

ಹುಲ್ಲು ಹುರುಳಿಗೂ ಹಣವಿಲ್ಲ!
ಹುಲ್ಲು, ಹುರುಳಿ, ಭೂಸ ಹೀಗೆ ಕುದುರೆಗೆ ದಿನಕ್ಕೆ ಐವತ್ತರಿಂದ 100 ರೂಪಾಯಿಗಳು ಖರ್ಚಾಗುತ್ತದೆ. ಇನ್ನು ಏನು ಉಳಿಯುತ್ತದೆ? ಇನ್ನು ನಮ್ಮ ಜೀವನ ಹೇಗೆ ಎಂಬ ಪ್ರಶ್ನೆಯನ್ನು ಇನ್ನೊಬ್ಬ ಟಾಂಗಾವಾಲ ರಿಯಾಜ್ ಹೇಳುತ್ತಾರೆ. ಈ ಕಥೆ ಕೇವಲ ಇವರಿಬ್ಬರದೇ ಅಲ್ಲ. ಎಲ್ಲಾ ಟಾಂಗಾವಾಲಗಳದ್ದೂ ಅದೇ ಕಥೆ ಅದೇ ವ್ಯಥೆಯಾಗಿದೆ. ತಾತ ಮುತ್ತಾತ ಕಾಲದಿಂದಲೂ, ಕೆಲವರು ವರದಕ್ಷಿಣೆಯ ಮೂಲಕ ಬಂದಿರುವಂತಹ ಟಾಂಗಾಗಳನ್ನು ಓಡಿಸಿಕೊಂಡು ಬದುಕು ಸಾಗಿಸಿಕೊಂಡು ಬಂದಿದ್ದಾರೆ. ಹಾಗಾಗಿ ಇದನ್ನು ಬಿಟ್ಟು ಬೇರೆ ಉದ್ಯೋಗಕ್ಕೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ.

ಬದುಕಿನ ಟಾಂಗಾ ನಡೆಯೋಕೆ ಬೇಕು ನಮ್ಮ ಸಹಕಾರ
ಅವರ ಜೀವನದ ಚಕ್ರಕ್ಕೆ ನಾವು ಕೂಡ ಟಾಂಗಾ ಹತ್ತಿ ಸವಾರಿ ಮಾಡೋಣ. ನೀವೂ ತಡಮಾಡದೆ ಬನ್ನಿ ಟಾಂಗಾ ಸವಾರಿಗೆ ಮುಂದಾಗಿ ಹಾಗೂ ಟಾಂಗಾ ಓಡಿಸುವ ಕುಟುಂಬಗಳ ಬದುಕಿನ ಬಂಡಿಯನ್ನು ಉರುಳಿಸಲು ಸಹಕಾರಿಯಾಗಿ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications