ಕಾವೇರಿ ತೀರ್ಪಿನ ಹಿನ್ನೆಲೆ: ಮೈಸೂರಿನಾದ್ಯಂತ ಬಿಗಿ ಬಂದೋಬಸ್ತ್
ಮೈಸೂರು, ಫೆಬ್ರವರಿ 05: ಇಂದು ಕಾವೇರಿ ತೀರ್ಪು ಹೊರಬೀಳುವ ಸಾಧ್ಯತೆ ಇರುವುದರಿಂದ ಮೈಸೂರು ಜಿಲ್ಲೆಯಲ್ಲಿ ಅಗತ್ಯ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಕಸ್ಮಾಕ್ ಕಾವೇರಿ ತೀರ್ಪು ರಾಜ್ಯದ ವಿರುದ್ಧ ಬಂದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ.
ಇದೇ ವೇಳೆ ಕಬಿನಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಕಬಿನಿ ಬಲದಂಡೆ ನಾಲೆಗೆ 1,200 ಕ್ಯೂಸೆಕ್ಸ್, ಎಡದಂಡೆ ನಾಲೆಗೆ 50 ಕ್ಯೂಸೆಕ್ಸ್, ಹುಲ್ಲಹಳ್ಳಿ ರಾಂಪುರ ನಾಲೆಗೆ 300 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಸರ್ಕಾರ ನಿರ್ಧಾರಿಸಿದೆ.
ಇಂದು(ಫೆ.5) ಮಧ್ಯಾಹ್ನದಿಂದ ನಾಲೆಗಳಲ್ಲಿ ನೀರು ಹರಿಯಲಿದೆ. ಈ ನೀರನ್ನು ಕಬಿನಿ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳನ್ನು ತುಂಬಿಸಲು ಮಾತ್ರ ಬಳಸಿಕೊಳ್ಳುಬೇಕು. ಯಾವುದೇ ರೀತಿಯ ಬೆಳೆ ಬೆಳೆಯಲು ಮುಂದಾಗಬಾರದೆಂದು ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಅಕಸ್ಮಾತ್ ಕಾವೇರಿ ತೀರ್ಪು ರಾಜ್ಯದ ವಿರುದ್ಧ ಬಂದರೂ, ರೈತರ ಸಿಟ್ಟನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಈ ಉಪಾಯ ಹೂಡಿದೆ. ಕಬಿನಿ ಜಲಾಶಯ ಸಮುದ್ರ ಮಟ್ಟದಿಂದ 2284 ಅಡಿ ಎತ್ತರದಲ್ಲಿದೆ.
ಜಲಾಶಯದ ಇಂದಿನ ನೀರಿನ ಮಟ್ಟ 2272.45 ಅಡಿ ಇದ್ದು, ಜಲಾಶಯದ ಒಳಹರಿವು 128 ಕ್ಯೂಸೆಕ್ಸ್ ಇದೆ. ಜಲಾಶಯದ ಸದ್ಯದ ಹೊರಹರಿವು 600 ಕ್ಯೂಸೆಕ್.
ಮಧ್ಯಾಹ್ನದ ವೇಳೆಗೆ ನಾಲೆಗಳಿಗೆ ನೀರು ಬಿಡುಗಡೆ ಮಾಡುವುದರಿಂದ ಜಲಾಶಯದ ಹೊರಹರಿವು 2,150 ಕ್ಯೂಸೆಕ್ ಗೆ ಹೆಚ್ಚಳವಾಗಲಿದೆ.












Click it and Unblock the Notifications