ಆತ್ಮಹತ್ಯೆಯಲ್ಲಿ ವಿವಾಹಿತ ಪುರುಷರು ಎತ್ತಿದಕೈ
ಮೈಸೂರು, ಮೇ 28: 'ಪುರುಷರು ತಮ್ಮ ಪತ್ನಿ ಅಥವಾ ಮಹಿಳಾ ಸಂಗಾತಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ ಎಂದು ಪುರುಷರ ಹಕ್ಕು ಕಾರ್ಯಕರ್ತರಾದ ಪೊನ್ನಪ್ಪ ಮತ್ತು ಕ್ರಿಸ್ಪ್ ಕುಮಾರ್ ಜಹಗೀರದಾರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 498A ಕಾನೂನು ದುರ್ಬಳಕೆ ಹೆಚ್ಚಾಗುತ್ತಿದ್ದು, ಪ್ರತಿ 9 ನಿಮಷಕ್ಕೆ ಒಬ್ಬ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ವರ್ಷಕ್ಕೆ 64,000 ಪುರುಷರು ಸಾವಿಗೀಡಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಪೊನ್ನಪ್ಪ ಮತ್ತು ಕ್ರಿಸ್ಪ್ ಕುಮಾರ್ ಜಹಗೀರದಾರ್ ಇತ್ತೀಚಿನ ವರ್ಷಗಳಲ್ಲಿ ತಮ್ಮ ಸಂಗಾತಿಗಳ ಕಿರುಕುಳ ಮತ್ತು ಕೌಟುಂಬಿಕ ಸಮಸ್ಯೆಗಳಿಂದಾಗಿ 1,57,000 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದರೆ 1,26,000 ಮಹಿಳೆಯರು ಮೃತಪಟ್ಟಿದ್ದಾರೆ. National Crime Records Bureau ಅಂಕಿ-ಸಂಖ್ಯೆಗಳ ಪ್ರಕಾರ ಈ ಮಾಹಿತಿ ಬಹಿರಂಗವಾಗಿದ್ದು, 2012ರಲ್ಲಿ 64,000 ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 32,000 ವಿವಾಹಿತ ಮಹಿಳೆಯರು ಸಾವಿಗೀಡಾಗಿದ್ದಾರೆ.

ಮುಖ್ಯವಾಗಿ, ಭಾರತೀಯ ದಂಡಸಂಹಿತೆ ಸೆಕ್ಷನ್ 498A ಕಾನೂನು ಹೆಚ್ಚು ದುರ್ಬಳಕೆಯಾಗುತ್ತಿದೆ. ಹಾಗಾಗಿ ಸದರಿ ಕಾನೂನಿಗೆ ಮಾರ್ಪಾಡು ತರುವುದು ಒಳಿತು ಎಂದು ಪೊನ್ನಪ್ಪ ಮತ್ತು ಕ್ರಿಸ್ಪ್ ಕುಮಾರ್ ಜಹಗೀರದಾರ್ ಸರಕಾರವನ್ನು ಆಗ್ರಹಿಸಿದ್ದಾರೆ.
ವಿಚ್ಛೇದನ ಅಥವಾ ಬೇರ್ಪಡಿಕೆಯಿಂದಾಗಿ ಏಕಾಂಗಿ ಪೂಷಕರಡಿ ಮಕ್ಕಳ ಮನಸುಗಳು ನರಳುತ್ತವೆ ಎಂದು ಆತಂಕ ವ್ಯಕ್ತಪಡಿಸಿದ ಇವರು, ಅಪ್ಪ ಮತ್ತು ಅಮ್ಮ ಇಬ್ಬರ ಪ್ರೀತಿಯೂ ಅಂತಹ ಮಕ್ಕಳಿಗೆ ಕಲ್ಪಿಸುವುದು ಅವರ ಹಕ್ಕು ಎಂದು ಪ್ರತಿಪಾದಿಸಿದರು.
ಇಂತಹ ಮಕ್ಕಳಿಗೆ ಅಪ್ಪ ಮತ್ತು ಅಮ್ಮ ಇಬ್ಬರ ಪ್ರೀತಿಯೂ ದಕ್ಕುವಂತಾಗಬೇಕು ಎಂದು ಬೇರ್ಪಟ್ಟ ದಂಪತಿಯನ್ನು ಒಂದುಗೂಡಿಸುವ ಕಾರ್ಯದಲ್ಲಿ ತಮ್ಮ CRISP ಸಂಸ್ಥೆ ತೊಡಗಿದೆ ಎಂದು ಕ್ರಿಸ್ಪ್ ಕುಮಾರ್ ಜಹಗೀರದಾರ್ ಅವರು ಹೇಳಿದರು. ಮಕ್ಕಳ ಪ್ರೀತಿಯಿಂದ ವಂಚಿತರಾದ ಅಪ್ಪಂದಿರಿಗಾಗಿ ನ್ಯಾಯವನ್ನೊದಗಿಸಲು ಬೆಂಗಳೂರು ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಕ್ರಿಸ್ಪ್ ಸಂಸ್ಥೆಯು ಪ್ರತಿ ವರ್ಷ ತಂದೆಯರ ದಿನವನ್ನು ಆಚರಿಸುತ್ತಿದೆ.












Click it and Unblock the Notifications