ಕೆ.ಆರ್.ಕ್ಷೇತ್ರದಿಂದ ಸುಚಿತ್ರಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಮೈಸೂರು, ಏಪ್ರಿಲ್ 14: ಮೈಸೂರಿನ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಕೆ.ಆರ್.ವಿಧಾನಸಭಾಕ್ಷೇತ್ರ ಎಲ್ಲರ ಕುತೂಹಲ ಕೆರಳಿಸಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಆಕಾಂಕ್ಷಿಗಳು ಪೈಪೋಟಿಗಿಳಿದಿದ್ದು, ರಾಜ್ಯದಾದ್ಯಂತ ಸುದ್ದಿಗೆ ಗ್ರಾಸವಾಗಿದೆ.
ಮಾಜಿ ಸಚಿವ ಎಸ್.ಎ.ರಾಮದಾಸ್ ಅವರಿಗೆ ಟಿಕೆಟ್ ನೀಡುವುದಕ್ಕೆ ಮುಖಂಡ ಹೆಚ್.ವಿ.ರಾಜೀವ್ ಮತ್ತು ಮಾಜಿ ಎಂಎಲ್ ಸಿ ಗೋ.ಮಧುಸೂದನ್ ಅವರು ವಿರೋಧ ವ್ಯಕ್ತಪಡಿಸುತ್ತಿರುವುದು ಜಗಜ್ಜಾಹೀರಾಗಿದೆ. ಈ ನಡುವೆ ಜೆಡಿಎಸ್ ನಿಂದ ಕೆ.ವಿ.ಮಲ್ಲೇಶ್ ಅವರು ಕಣಕ್ಕಿಳಿದಿದ್ದರೆ, ಕಾಂಗ್ರೆಸ್ ನಿಂದ ಹಾಲಿ ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.
ಇದೆಲ್ಲದರ ನಡುವೆ ಕ್ಷೇತ್ರದಿಂದ ಸ್ಪರ್ಧಿಸಲಿರುವ ಘಟಾನುಘಟಿಗಳಿಗೆ ಪೈಪೋಟಿ ನೀಡಲು ಸ್ನಾತಕೋತ್ತರ ಪದವೀಧರೆ ಕು.ಸುಚಿತ್ರಾ ಮುಂದಾಗಿದ್ದಾರೆ. ಇವರು ಮೈಸೂರಿನ ಲಕ್ಷ್ಮೀಪುರಂನ ಸಂಜೀವಿನಿ ಫೌಂಡೇಷನ್ ವತಿಯಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಒಂದಷ್ಟು ಜನರ ಒಡನಾಟ ಹೊಂದಿದ್ದಾರೆ.

ಎಂ.ಎಸ್ಸಿ.ನರ್ಸಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಖಾಸಗಿಯಾಗಿ ಸಂಜೀವಿನಿ ಫೌಂಡೇಷನ್ ವತಿಯಿಂದ ಸಮಾಜ ಸೇವೆ ಸಲ್ಲಿಸುತ್ತಿರುವ ಇವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಬುದ್ಧ, ಬಸವ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ಪರ್ಧೆ ಮಾಡುತ್ತಿರುವುದಾಗಿ ಘೋಷಿಸಿಗೊಂಡಿದ್ದಾರೆ.
ಸಮಾಜ ಸೇವಾ ಕಾರ್ಯವನ್ನೇ ಜೀವನದ ಮೂಲ ಮಂತ್ರ ಎಂದು ಅರಿತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಯಾಗಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ, ನ್ಯಾಯಯುತ ಹಾಗೂ ಪ್ರಾಮಾಣಿಕವಾಗಿ ಬದ್ಧತೆಯಿಂದ ನಡೆಸಬೇಕೆಂದು ಸ್ಪರ್ಧಿಸಲಿಚ್ಛಿಸಿರುವುದಾಗಿ ಹೇಳಿದ್ದಾರೆ.
ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿ ಜಾತಿ, ಮತ, ಧರ್ಮ, ಪಂಥ, ಪಂಗಡ, ಪಕ್ಷ ರಾಜಕಾರಣ ಮತ್ತು ವಂಶಪಾರಂಪರ್ಯ ರಾಜಕಾರಣ ಇವೆಲ್ಲವನ್ನೂ ಮೆಟ್ಟಿ ನಿಂತು ಸಾಮಾಜಿಕ ಹೊಣೆಗಾರಿಕೆ ಹೊತ್ತು ಜನಪರ ಸೇವಾಕಾಂಕ್ಷಿ ಪ್ರಜಾ ಪ್ರತಿನಿಧಿಯಾಗಿ ಸ್ಪರ್ಧೆಗಿಳಿಯುತ್ತಿರುವುದಾಗಿ ಘೋಷಿಸಿದ್ದಾರೆ.
ಕೆ.ಆರ್.ಕ್ಷೇತ್ರದಿಂದ ಇನ್ನಷ್ಟು ಪಕ್ಷೇತರರು ಕಣಕ್ಕಿಳಿಯುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ನೈಜ ಚಿತ್ರಣ ತಿಳಿಯಲಿದೆ.












Click it and Unblock the Notifications