ಮೈಸೂರಿನಲ್ಲಿ ರಾಜ್ಯಮಟ್ಟದ ಖಾದಿ ವಸ್ತುಪ್ರದರ್ಶನಕ್ಕೆ ಚಾಲನೆ
ಮೈಸೂರು, ನವೆಂಬರ್. 16:ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜೆ.ಕೆ. ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯಮ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದು ಶುಕ್ರವಾರ ಚಾಲನೆ ಲಭಿಸಿತು.
ನ.22ರವರೆಗೆ ನಡೆಯಲಿರುವ ಉತ್ಸವದಲ್ಲಿ ರಾಜ್ಯದ 22 ಮಳಿಗೆಗಳು ಸೇರಿದಂತೆ ಒಟ್ಟು 91 ಮಳಿಗೆಗಳನ್ನು ತೆರೆಯಲಾಗಿದೆ. ಖಾದಿ ಉತ್ಸನ್ನಗಳಿಗಾಗಿ 40 ಮಳಿಗೆಗಳನ್ನು ಮೀಸಲಿಡಲಾಗಿದ್ದು, ಗ್ರಾಮೋದ್ಯಮ ವಸ್ತು ಪ್ರದರ್ಶನದ 51 ಮಳಿಗೆಗಳಿವೆ.
ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಖಾದಿ ಗ್ರಾಮೋದ್ಯಮ ಮಂಡಳಿಯು ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಅದನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು.

ಖಾದಿ ಬಟ್ಟೆಗಳನ್ನು ಬಳಸಿದರೆ ಗಾಂಧೀಜಿ ಹಾಗೂ ಈ ದೇಶದ ಸ್ವಾತಂತ್ರ್ಯಕ್ಕೆ ಗೌರವ ಕೊಟ್ಟಂತೆ. ಗಾಂಧಿ ಟೋಪಿ ಈ ದೇಶದ ಸಂಸ್ಕೃತಿಯ ಸಂಕೇತ. ಗಾಂಧೀಜಿ ಅವರು ವಿದೇಶದ ವ್ಯಾಮೋಹಕ್ಕೆ ಒಳಗಾಗಲಿಲ್ಲ. ಗುಡಿ ಕೈಗಾರಿಕೆಗೆ ಒತ್ತು ನೀಡಿದ್ದರು.
ಕರ್ನಾಟಕದಲ್ಲಿರುವ ಶಾಲಾ ಮಕ್ಕಳಿಗೆ ಖಾದಿ ಸಮವಸ್ತ್ರವನ್ನು ಕೊಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಹಾಗೆಯೇ ಈ ಖಾದಿ ಉತ್ಸವವನ್ನು ಪ್ರತಿ ವರ್ಷ ಮೈಸೂರಿನಲ್ಲೇ ಮಾಡಲಾಗುವುದು.ಇಂದಿನ ದಿನಗಳಲ್ಲಿ ಯುವಕರು ಖಾದಿ ಬಳಸುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಯುವ ಸಮೂಹದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಜಿಟಿಡಿ ತಿಳಿಸಿದರು.

ಉತ್ಸವದಲ್ಲಿ ಆಕರ್ಷಕ ವಿನ್ಯಾಸದ ಖಾದಿ ಉತ್ಪನ್ನಗಳಷ್ಟೇ ಅಲ್ಲದೆ ದೇಸಿ ಕೈಮಗ್ಗಗಳಲ್ಲಿ ತಯಾರಾದ ಅಪ್ಪಟ ರೇಷ್ಮೆ ಸೀರೆಗಳು, ಕಾಟನ್, ಸಿಲ್ಕ್ ಸೀರೆಗಳು, ದುಪಟ್ಟಾಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಸಿದ್ಧ ಉಡುಪು, ಕುರ್ತಾ, ಪೈಜಾಮ, ಚೂಡಿದಾರ್, ಲುಂಗಿ, ಕರವಸ್ತ್ರ, ಜಮ್ಮು ಮತ್ತು ಕಾಶ್ಮೀರದ ಸಿದ್ಧ ಉಡುಪುಗಳು, ಸೂಟ್ಸ್, ಜೇನುತುಪ್ಪ, ಆಯುರ್ವೇದ ಔಷಧಿಗಳು, ಚನ್ನಪಟ್ಟಣ ಬೊಂಬೆ, ಚಪ್ಪಲಿಗಳ ಮಳಿಗೆಗಳು ಇವೆ.












Click it and Unblock the Notifications