ಮಾ.1, 2ರಂದು ಮೈಸೂರಿನ ಸುತ್ತೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ
ಮೈಸೂರು, ಫೆಬ್ರವರಿ 26: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋತ್ವದಲ್ಲಿ ಮಾ.1 ಮತ್ತು 2 ರಂದು ಮೈಸೂರಿನ ಸುತ್ತೂರಿನಲ್ಲಿ 34 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 1 ರಂದು ಸಮ್ಮೇಳನಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಸುತ್ತೂರು ಶ್ರೀಕ್ಷೇತ್ರದ ಪೀಠಾಧಿಪತಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರವರಿಂದ ಸಾಧ್ವಿ ಸುದ್ದಿಕೋಶ ಲೋಕಾರ್ಪಣೆ, ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯಚಿತ್ರಕ್ಕೆ ಚಾಲನೆ, ವಸ್ತುಪ್ರದರ್ಶನವನ್ನು ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಲಿದ್ದಾರೆ. ಸಂಸದ ಆರ್.ಧೃವನಾರಾಯಣ್ ಸಾಕ್ಷ್ಯಚಿತ್ರ ಉದ್ಘಾಟನೆ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮಾಧ್ಯಮ ಮತ್ತು ರಾಜಕಾರಣ ಕುರಿತು ಗೋಷ್ಠಿ, ಮಹಿಳಾ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಜರುಗಲಿದೆ ಎಂದರು.
ಪತ್ರಕರ್ತರ ಸಮ್ಮೇಳನಕ್ಕೆ ಈಗಾಗಲೇ ಸಿದ್ಧತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ಪತ್ರಕರ್ತ ರಾಜಶೇಖರ್ ಕೋಟಿ ಹೆಸರಿನಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದ್ದು, ಮೊಳೆ ಅಚ್ಚು ಮುದ್ರಣ ಯಂತ್ರ, ಹಳೇ ಕಾಲದ ರೇಡಿಯೋ, ಕ್ಯಾಮೆರಾ ಹಾಗೂ ಹಳೇ ಟಿವಿಗಳ ಪ್ರದರ್ಶನ, ಆಕಾಶವಾಣಿ ತಾಂತ್ರಿಕ ಮಾಹಿತಿಯನ್ನು ಮೈಸೂರು ಆಕಾಶವಾಣಿ ತಂತ್ರಜ್ಞರು ಪ್ರಸ್ತುತಪಡಿಸಲಿದ್ದಾರೆ ಎಂದರು.

ಶ್ರೀಲಂಕಾದ ಡೈಲಿ ಮಿರರ್ ಪತ್ರಿಕೆ ಸಂಪಾದಕ ಕುರುಲು ಕೂಜಾಣ , ಶ್ರೀಲಂಕಾದ ಅಂತರಾಷ್ಟ್ರೀಯ ಫೋಟೋ ಜರ್ನಲಿಸ್ಟ್ ಗೀತಿಯಾ ತಾಲೂಕದಾರ್, ನೇಪಾಳದ ಮೆಟ್ರೋ ಎಫ್ ಎಂ ಸುದ್ದಿ ಸಂಪಾದಕ ಆಶೋಕ ಸಿಲ್ವಿಲ್ ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಮಾ.2ರಂದು ಸಾಧನೆಗೈದ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಸಹ ನಡೆಸಲಾಗುವುದು.












Click it and Unblock the Notifications