ಜಂಬೂ ಸವಾರಿಗೆ ಸಜ್ಜಾಗಿದೆ ಮೈಸೂರು
ಮೈಸೂರು, ಅ.13 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯು ವಿಜಯ ದಶಮಿಯ ದಿನವಾದ ಸೋಮವಾರ ನಡೆಯಲಿದೆ. ಇದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಸೋಮವಾರ ಮಧ್ಯಾಹ್ನ 1.12 ರಿಂದ 1.40ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸಲಿದ್ದಾರೆ. ಮೈಸೂರಿನವರೇ ಆದ ಸಿದ್ದರಾಮಯ್ಯ ಅವರಿಗೆ ಜಂಬೂ ಸವಾರಿಗೆ ಚಾಲನೆ ನೀಡುವ ಅವಕಾಶ ಸಿಕ್ಕಿದೆ.

ಅರಮನೆಯ ಒಳಾವರಣದಲ್ಲಿ ನಿರ್ಮಿಸುವ ವಿಶೇಷ ವೇದಿಕೆಯಲ್ಲಿ ನಿಂತು ಸಿಎಂ ಗಜರಾಜ ಅರ್ಜುನ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ ಮುಂತಾದವರು ಈ ಸಂರ್ಭದಲ್ಲಿ ಉಪಸ್ಥಿತರಿರುವರು. ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಅಧಿಕೃತ ಚಾಲನೆ ದೊರೆಯಲಿದೆ.
ಕರ್ನಾಟಕದಲ್ಲಿ ಈ ವರ್ಷ ಉತ್ತಮ ಮಳೆ ಬೆಳೆಯಾಗಿದ್ದು, ಜನರು ಸಂತಸಗೊಂಡಿದ್ದಾರೆ. ಆದ್ದರಿಂದ ಮೈಸೂರು ದಸರಾ ಮತ್ತಷ್ಟು ಸಂಭ್ರಮದಿಂದ ಕೂಡಿದೆ. ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಸೋಮವಾರದ ಜಂಬೂ ಸವಾರಿಗೆ ಸಾಕ್ಷಿಯಾಗಲಿದ್ದಾರೆ.
ಜಂಬೂ ಸವಾರಿ ಸಾಗುವ ಮಾರ್ಗವನ್ನು ಸಿಂಗರಿಸುವ ಅಂತಿಮ ಹಂತದ ಕೆಲಸಗಳು ಭಾನುವಾರ ಭರದಿಂದ ಸಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಗಳನ್ನು ಸಜ್ಜುಗೊಳಿಸುವ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದೆ.
ಸೋಮವಾರ ಸಂಜೆ ನಡೆಯಲಿರುವ ಪಂಜಿನ ಕವಾಯಿತಿನಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೌರವ ವಂದನೆ ಸ್ವೀಕರಿಸಲಿದ್ದಾರೆ. ಈ ಮೂಲಕ ಹತ್ತು ದಿನಗಳ ದಸರಾ ಉತ್ಸವಕ್ಕೆ ವಿದ್ಯುಕ್ತವಾಗಿ ತೆರೆ ಬೀಳಲಿದೆ.












Click it and Unblock the Notifications