ಮುಡಾ ಸೈಟು ಹಂಚಿಕೆ ವಿವಾದ: ಆರ್‌ಟಿಐನಲ್ಲಿ ತಿಳಿದ ಮಾಹಿತಿಗಳೇನು?
ಮೈಸೂರಿನಲ್ಲಿ ಮುಡಾ ನಿವೇಶನ ಹಂಚಿಕೆ ದೊಡ್ಡ ವಿವಾದವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹೆಸರು ಕೇಳಿಬಂದಿದೆ. ಭೂಸ್ವಾಧೀನಕ್ಕೆ 3.24 ಲಕ್ಷ ರೂಪಾಯಿ ಪರಿಹಾರ ನಿಗದಿಯಾಗಿದ್ದ ಜಮೀನಿಗೆ ಇದೀಗ 35 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬೆಲೆ ಬಾಳುವ ಸುಮಾರು 14 ಸೈಟ್‌ಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.
ವಿರೋಧ ಪಕ್ಷಗಳ ಮುಖಂಡರು ಮುಗಿ ಬಿದ್ದಿದ್ದಾರೆ. ಇದರಲ್ಲಿ ಯಾವುದೇ ಹಗರಣವಾಗಿಲ್ಲ, ಕಾನೂನು ಬದ್ಧವಾಗಿಯೇ ಪ್ರಕ್ರಿಯೆ ನಡೆದಿದೆ ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.

ವಿಜಯನಗರ 3ನೇ ಹಾಗೂ 4ನೇ ಹಂತದ ಪ್ರತಿಷ್ಠಿತ ಬಡಾವಣೆಯಲ್ಲಿ 38,284 ಚದರ ಅಡಿ ವಿಸ್ತೀರ್ಣದ ಒಟ್ಟು 14 ನಿವೇಶನಗಳನ್ನು ವರ್ಗಾವಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ 14 ನಿವೇಶನಗಳಿಗೆ ಶುಲ್ಕವಾಗಿ ತಲಾ ಒಂದೊಂದು ಸಾವಿರ ರೂಪಾಯಿಗಳನ್ನು ಮುಡಾ ಪಡೆದಿದೆ. ಅಲ್ಲದೆ, ಮೂಲ ಜಮೀನು ಭೂಸ್ವಾಧೀನ ಪ್ರಕ್ರಿಯೆಗೆ ಒಳಗಾಗಿ ನಂತರ ಡೀನೋಟಿಫೈ ಆಗಿರುವುದು ಸಾಮಾಜಿಕ ಕಾರ್ಯಕರ್ತ ಎನ್.ಗಂಗರಾಜು ಅವರು ಪಡೆದ ಆರ್‌ಟಿಐನಿಂದ ಬಯಲಾಗಿದೆ.
ಏನಿದು ಆರೋಪ?
ಮೈಸೂರಿನ ಕೆಸರೆ ರಿಂಗ್ ರಸ್ತೆಯ ಪಕ್ಕದಲ್ಲಿ ಸಿದ್ದರಾಮಯ್ಯ ಅವರ ಪತ್ನಿಯ ಹೆಸರಿನಲ್ಲಿದ್ದ ಜಾಗವನ್ನು ಮುಡಾ ಲೇಔಟ್ ಮಾಡಿ ನಿವೇಶನಗಳನ್ನು ಹಿಂದೆಯೇ ಹಂಚಿದೆ. ಇದಕ್ಕೆ ಪರ್ಯಾಯವಾಗಿ 50:50 ಆಧಾರದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಬೇರೆಡೆ ಜಮೀನು ನೀಡಬೇಕಿತ್ತು. ಆದರೆ, ನಗರದ ಹೃದಯಭಾಗವಾಗಿರುವ ಭಾರಿ ಬೆಲೆ ಬಾಳುವ ಪ್ರತಿಷ್ಠಿತ ಬಡಾವಣೆಗಳಾದ ವಿಜಯನಗರ ಒಂದು ಹಾಗೂ ಎರಡನೇ ಹಂತ ಹಾಗೂ ಇತರೆಡೆಗಳಲ್ಲಿ ನಿವೇಶನ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು 2020ರಲ್ಲಿ ಬದಲಿಯಾಗಿ ನೀಡಲಾಗಿದೆ. ಈ ಕುರಿತು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು.
ಮುಡಾದ 50:50 ನಿವೇಶನ ಹಂಚಿಕೆ ವಿವಾದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯ ಸೈಟ್‌ಗಳೂ ಇರುವುದರಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಿಬಿಐ ತನಿಖೆಗೆ ಒಪ್ಪಿಸಿ ಅಲ್ಲಿತನಕ ಎಲ್ಲಾ ಪ್ರಕ್ರಿಯೆಯನ್ನು ರದ್ದು ಪಡಿಸಿದರೆ ಸಿಎಂ ಕುರಿತು ಗೌರವ ಇನ್ನೂ ಹೆಚ್ಚಾಗುತ್ತದೆ ಎಂದು ಆರ್‌ಟಿಐ ಕಾರ್ಯಕರ್ತ ಎನ್.ಗಂಗರಾಜು ತಿಳಿಸಿದ್ದಾರೆ.
ಈ ಕುರಿತು ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನನ್ನ ಪತ್ನಿಗೆ ಸೇರಿದ ಜಮೀನನ್ನು ಮುಡಾ ಸ್ವಾಧೀನ ಮಾಡಿಕೊಂಡಿದ್ದು, ಅದಕ್ಕೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಬೇರೆಡೆ ನಿವೇಶನಗಳನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಡಲಾಗಿದೆ' ಎಂದಿದ್ದಾರೆ.












Click it and Unblock the Notifications