ಸಿದ್ದರಾಮಯ್ಯ ಸುಮ್ಮನೆ ಆರೋಪ ಮಾಡುತ್ತಾರೆ; ಸೋಮಶೇಖರ್
ಮೈಸೂರು, ಫೆಬ್ರವರಿ 08; "ಮುಖ್ಯಮಂತ್ರಿಗಳ ಬಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ವೃಥಾ ಆರೋಪ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸದೆ ಹೀಗೆ ಹೇಳುತ್ತಿದ್ದಾರೆ" ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಸಚಿವರು, "ಯಾವ ರಾಜಕಾರಣಿಗಳು ಜಾಮೀನಿನ ಮೇಲೆ ಇಲ್ಲ?, ಕೆಲವು ವೈಯುಕ್ತಿಕ ವಿಷಯಗಳಲ್ಲೂ ಪ್ರಕರಣಗಳಿರುತ್ತವೆ. ಅದಕ್ಕೂ ಆಡಳಿತಕ್ಕೂ ಸಂಬಂಧವಿಲ್ಲ. ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ" ಎಂದರು.
"ಸರ್ಕಾರ ಏನೂ ಮಾಡಿಲ್ಲಎಂದು ಹೇಳುವುದು ವಿರೋಧ ಪಕ್ಷದವರ ಕೆಲಸವಾಗಿದೆ. ವಿರೋಧ ಪಕ್ಷದವರು ಜನಪ್ರಿಯ ಸರ್ಕಾರ ಎಂದು ಹೇಳುತ್ತಾರೆಯೇ?, ಸುಮ್ಮನೆ ನಮ್ಮ ಬಗ್ಗೆ ಹೇಳುತ್ತಿದ್ದಾರೆ. ಅವರೇ ವಿರೋಧ ಪಕ್ಷವಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ" ಎಂದು ದೂರಿದರು.

"ವಿರೋಧ ಪಕ್ಷದವರಾಗಿ ಅವರೇ ಜಿಲ್ಲೆಗಳಿಗೆ ಪ್ರವಾಸಕ್ಕೂ ಹೋಗುತ್ತಿಲ್ಲ. ಅವರು ಪ್ರವಾಸಕ್ಕೆ ಸಹ ಸರ್ಕಾರವೇ ಹಣ ನೀಡುತ್ತದೆ. ಆದರೆ, ಅವರು ಮಾಡುವ ಕೆಲಸ ಮಾಡದೇ ಸುಮ್ಮನೆ ಈ ರೀತಿ ಹೇಳುತ್ತಾರೆ" ಎಂದು ಎಸ್. ಟಿ. ಸೋಮಶೇಖರ್ ಆರೋಪಿಸಿದರು.
"ಸದನದಲ್ಲಿ ವಿರೋಧ ಪಕ್ಷದ ನಾಯಕರು, ವಿರೋಧ ಪಕ್ಷಗಳ ಸದಸ್ಯರು ಮಾಡಿದ ಆರೋಪಕ್ಕೆ ನಾನೂ ಸಹಿತ ಎಲ್ಲರೂ ಉತ್ತರ ಕೊಟ್ಟಿದ್ದೇವೆ. ಎಲ್ಲರನ್ನೂ ಸಮರ್ಥವಾಗಿ ಎದುರಿಸಿದ್ದೇವೆ. ಸರ್ಕಾರದಿಂದ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ತಿಳಿಸಿದ್ದೇವೆ" ಎಂದು ಸಚಿವರು ವಿವರಿಸಿದರು.
"ಮುಖ್ಯಮಂತ್ರಿಗಳು ಸದನದಲ್ಲಿ ಮಾತನಾಡಲು ನಿಂತಾಗ ನಾವು ಯಾರೂ ಮಾತನಾಡುವುದಿಲ್ಲ. ಅವರು ನಮ್ಮ ನಾಯಕರು. ಅವರು ಸದನದಲ್ಲಿ ಒಂದೂವರೆ ಗಂಟೆಗಳ ಕಾಲ ಮಾತನಾಡಿ ಸರ್ಕಾರದ ಎಲ್ಲ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಅವರೊಬ್ಬರನ್ನೇ ಏಕಾಂಗಿಯನ್ನಾಗಿ ಬಿಟ್ಟಿದ್ದೇವೆ ಎಂಬುದು ಸುಳ್ಳು" ಎಂದು ಹೇಳಿದರು.
ವಿಧಾನಸೌಧದಲ್ಲಿ ಪೋಟೋ: "10ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಫೋಟೋಗಳನ್ನು ವಿಧಾನಸೌಧದಲ್ಲಿ ಅಳವಡಿಸುವ ಬಗ್ಗೆ ನಾನೇ ಖುದ್ದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಮನವಿ ಮಾಡಿದ್ದೆ" ಎಂದು ಎಸ್. ಟಿ. ಸೋಮಶೇಖರ್ ಹೇಳಿದರು.
"ಸ್ಪೀಕರ್ ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಾವೂ ಸಹ ಮೈಸೂರಿನ ಅಭಿವೃದ್ಧಿಗೆ ಇವರ ಕೊಡುಗೆ ಬಗ್ಗೆ ತಿಳಿದಿದ್ದೇನೆ. ಹೀಗಾಗಿ ವಿಧಾನಸಭೆಯಲ್ಲಿ ಫೋಟೋ ಅಳವಡಿಸಲು ಕ್ರಮ ವಹಿಸುತ್ತೇನೆ ಎಂದು ಹೇಳಿದ್ದಾರೆ" ಎಂದು ಸಚಿವ ಸೋಮಶೇಖರ್ ತಿಳಿಸಿದರು.












Click it and Unblock the Notifications