ಪಾದರಕ್ಷೆ ಧರಿಸಿ ತಾಯಿಗೆ ಪುಷ್ಪಾರ್ಚನೆ ಮಾಡಿಲ್ಲ: ಸಿದ್ದು
ಬೆಂಗಳೂರು, ಅ.5: ವಿಶ್ವಖ್ಯಾತ ಮೈಸೂರಿನ ದಸರಾ ಮಹೋತ್ಸವದ ಜಂಬೂಸವಾರಿ ಚಾಲನೆ ನೀಡುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಚಾತುರ್ಯ ನಡೆದಿದೆ. ದಸರಾ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಸಿಎಂ ಅವರು ಪಾದರಕ್ಷೆ ಧರಿಸಿಕೊಂಡು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸಿದ್ದರಾಮಯ್ಯ ಅವರು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನ ದಸರಾ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಪಾದರಕ್ಷೆ ಧರಿಸಿ, ನಾಡಿನ ಅಧಿದೇವತೆ ಮಾತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಿದರೆಂದು ಕೆಲವು ಮಾಧ್ಯಮಗಳು ಸತ್ಯಕ್ಕೆ ದೂರವಾದ ವರದಿ ಪ್ರಸಾರ ಮಾಡಿದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಶ್ವವಿಖ್ಯಾತ 404ನೇ ದಸರೆಗೆ ಶನಿವಾರ ತೆರೆ ಎಳೆಯಲಾಯಿತು. ವಿಜಯನಗರ ಸಾಮ್ರಾಜ್ಯ ಆರಂಭಿಸಿದ ಮಹಾನವಮಿ ಹಬ್ಬ ಧಾರ್ಮಿಕತೆ ಹಾಗೂ ಸಾಂಸ್ಕೃತಿಕತೆಯ ಸಮ್ಮಿಲನ ವಿಜಯದಶಮಿ ಮೆರವಣಿಗೆ ರೂಪದಲ್ಲಿ ವಿಶ್ವದ ಗಮನ ಸೆಳೆದಿದೆ.
750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ, ಮೂವತ್ತು ಜಿಲ್ಲೆಗೆ ವೈವಿಧ್ಯಮಯ ಸ್ತಬ್ಧ ಚಿತ್ರಗಳು, ಒಂದಕ್ಕಿಂತ ಒಂದು ಮಿಗಿಲಾಗಿದ್ದ ಜಾನಪದ ಕಲಾ ಮೇಳ, ಅಶ್ವದಳ, ಆರಕ್ಷಕ ದಳಗಳ ಶಿಸ್ತಿನ ಹೆಜ್ಜೆ ಜನರ ಮೆಚ್ಚಿಗೆ ಗಳಿಸಿತು.
ನಾಡ ದೇವತೆ ಮಾತೆ ಶ್ರೀ ಚಾಮುಂಡೇಶ್ವರಿ ದೇವಿಯ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ತಾವು ಜನರ ಮನಸ್ಸಿಗೆ ನೋವುಂಟು ಮಾಡುವ ಕೆಲಸವನ್ನು ಎಂದೂ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಮಾಧ್ಯಮಗಳು ಜನರ ಭಾವನೆಗಳನ್ನು ಕೆರಳಿಸುವ ಕಾರ್ಯ ಮಾಡಬಾರದು. ಅನಗತ್ಯ ವಿವಾದಗಳ ಸೃಷ್ಟಿಸಿ, ಹಬ್ಬದ ಸಂದರ್ಭದಲ್ಲಿ ಸಂತಸದ ವಾತಾವರಣವನ್ನು ಹಾಳುಗೆಡವುದು ಸಮಾಜದ ದೃಷ್ಠಿಯಿಂದಲೂ ಒಳಿತಲ್ಲ ಎಂದು ಸಿದ್ದರಾಮಯ್ಯ ಅವರು ತಮ್ಮ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.

ದಸರಾ ಮೆರವಣಿಗೆಗೆ ಚಾಲನೆ ನೀಡಿದ ಸಿದ್ದರಾಮಯ್ಯ
ಶನಿವಾರ ಮಧ್ಯಾಹ್ನ 1.05ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮ ಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಂದಿಧ್ವಜ ಕುಣಿತಕ್ಕೆ ಹೆಜ್ಜೆ ಹಾಕಿದರು. ನಂತರ ಮಧ್ಯಾಹ್ನ 3:20ಕ್ಕೆ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ನಾಡದೇವಿ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ವಿ.ಶ್ರೀನಿವಾಸ ಪ್ರಸಾದ್, ಎಚ್.ಸಿ.ಮಹಾದೇವಪ್ಪ, ಎಚ್.ಎಸ್.ಮಹಾದೇವಪ್ರಸಾದ್, ಜಿಲ್ಲಾಧಿಕಾರಿ ಸಿ.ಶಿಖಾ, ಮೇಯರ್ ರಾಜೇಶ್ವರಿ, ಪ್ರಾದೇಶಿಕ ಆಯುಕ್ತೆ ರಷ್ಮಿ, ಶಾಸಕರಾದ ಎಂ.ಕೆ.ಸೋಮಶೇಖರ್, ತನ್ವೀರ್ ಸೇಠ್, ಪೊಲೀಸ್ ಆಯುಕ್ತ ಡಾ.ಸಲೀಂ ಮತ್ತಿತರರಿದ್ದರು.

ಅರಮನೆ ಮುಂಭಾಗದಲ್ಲಿ ನಡೆದ ಘಟನೆ
ಅರಮನೆ ಮುಂಭಾಗ 15ಅಡಿ ಎತ್ತರದಲ್ಲಿ ನಿರ್ಮಿ ಸಲಾಗಿದ್ದ ವಿಶೇಷ ವೇದಿಕೆಗೆ ಮುಖ್ಯ ಅತಿಥಿಗಳು ಆಗಮಿಸುತ್ತಿದ್ದಂತೆಯೇ ರಾಷ್ಟ್ರಗೀತೆ ಮೊಳಗಿತು. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆ, ಅಂಬಾರಿಯೊಳಗೆ ಪ್ರತಿಷ್ಠಾಪಿಸಲಾಗಿದ್ದ ನಾಡದೇವಿಯ ಮೂರ್ತಿಗೆ ಪುಷ್ಪಾರ್ಚನೆ ನಡೆಯುತಿದ್ದಂತೆಯೇ 21 ಕುಶಾಲತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಲಾಯಿತು. ಅಂಬಾರಿ ಹೊತ್ತ ಅರ್ಜುನನಿಗೆ ಆನೆಗಳಾದ ಮೇರಿ, ವರಲಕ್ಷ್ಮಿ ಜೊತೆಗಿದ್ದವು.

ನಾಗರಿಕರಿಗೆ ಸಿಎಂ ಸಿದ್ದು ಸಂದೇಶ
ಸಮಾಜದಲ್ಲಿ ಶಾಂತಿ, ಸಾಮ ರಸ್ಯ, ಸಮಾನತೆ ಸ್ಥಾಪಿತವಾಗಲಿ ಎಂದು ದಸರಾ ವಿಜಯದಶಮಿ ಮೆರವಣಿಗೆಯನ್ನು ಉದ್ಘಾಟಿಸಿ ಸಂದೇಶ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರೂ ಒಳಗೊಂಡ ಸಮಾಜತೆಯ ಸಮಾಜ ನಿರ್ಮಾಣವಾಗಬೇಕೆಂದು ಕರೆ ನೀಡಿದರು.
'ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷಣೆ' ಎಂಬ ಮೂಲ ಸಂದೇಶ ಸಾರುವ ದಸರೆ ಸಮಾಜದ ಎಲ್ಲಾ ಕೆಡುಕನ್ನು ತೊಡೆದು ಹಾಕಿ ಶಾಂತಿ, ನೆಮ್ಮದಿ, ಸಾಮರಸ್ಯ ತರಲಿ. ಜನತೆಗೆ ಸಂತೋಷ, ಸಮೃದ್ಧಿ ತರಲಿ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ವಾಸಿಸುವಂತಾಗಲಿ ಎಂದು ಹಾರೈಸಿದರು.

ಸಿಎಂರಿಂದ ಫೇಸ್ ಬುಕ್ ನಲ್ಲಿ ಸ್ಪಷ್ಟನೆ
ನಾನು ಕಪ್ಪು ಬಣ್ಣದ ಶೂ ಧರಿಸಿ ಸ್ತಬ್ದ ಚಿತ್ರಗಳ ಮೆರವಣಿಗೆ ನೋಡಿದೆ. ತಾಯಿ ಚಾಮುಂಡೇಶ್ವರಿ ಹೊತ್ತ ಜಂಬೂಸವಾರಿ ಆಗಮಿಸುತ್ತಿದ್ದಂತೆ ಶೂ ಕಳಚಿ ವೇದಿಕೆ ಏರಿ ಮಾತೆಗೆ ಪುಷ್ಪ ಅರ್ಪಿಸಿದೆ. ಆದರೆ, ನಾನು ಶೂ ಧರಿಸಿ ಮಾತೆಗೆ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವೆ ಎಂದು ಅನೇಕ ಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹಬ್ಬಿದೆ. ಇವೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ಈ ಚಿತ್ರಸರಣಿಯಲ್ಲಿರುವ ನಾಲ್ಕು ಚಿತ್ರಗಳ ಕೃಪೆ: ಸಿದ್ದರಾಮಯ್ಯ ಅವರ ಅಧಿಕೃತ ಫೇಸ್ ಬುಕ್ ಖಾತೆ












Click it and Unblock the Notifications