ರೈಲ್ವೆ ಅಧಿಕಾರಿಗೆ ಕನ್ನಡ ಟಾಸ್ಕ್ ಕೊಟ್ಟ ವಿ.ಸೋಮಣ್ಣ-ಏನದು?
ಮೈಸೂರು, ಸೆಪ್ಟೆಂಬರ್, 13: ಸಾಮಾನ್ಯವಾಗಿ ಕರ್ನಾಟಕದವರು ಬೇರೆ ಕಡೆಗೆ ಹೋದರೆ ಅವರ ಭಾಷೆಯನ್ನು ಕಲಿತುಕೊಂಡಾದರೂ ಮಾತನಾಡುತ್ತಾರೆ. ಆದರೆ ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಉದ್ಯೋಗಕ್ಕೆ ಬಂದು ಕನ್ನಡ ಮಾತನಾಡದೇ ದರ್ಪ ತೋರುವವರ ಸಂಖ್ಯೆಯೇ ಹೆಚ್ಚಾಗಿದೆ. ಇನ್ನೂ ಇದೀಗ ಇದೇ ವಿಚಾರಕ್ಕೆ ಸಚಿವ ವಿ.ಸೋಮಣ್ಣ ರೈಲ್ವೆ ಅಧಿಕಾರಿಗೆ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹಿಂದಿಯಲ್ಲಿ ಮಾಹಿತಿ ನೀಡಲು ಮುಂದಾದ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕನ್ನಡ ಮಾತಾಡದ ರೈಲ್ವೆ ಅಧಿಕಾರಿಗಳಿಗೆ ಕನ್ನಡದಲ್ಲಿ ಮಾಹಿತಿ ನೀಡಲು ಹೇಳಿದಾಗ ಆ ಅಧಿಕಾರಿಗಳು ತಮಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಇಲ್ಲಿ ಬಂದು ಎಷ್ಟು ದಿನ ಆಯ್ತು? ನಾನು ದೆಹಲಿಗೆ ಹೋಗಿ 3 ತಿಂಗಳಲ್ಲಿ ಹಿಂದಿ ಕಲಿತಿದ್ದೇನೆ. ನೀವು ಕೂಡ 3 ತಿಂಗಳಲ್ಲಿ ಕನ್ನಡ ಕಲಿಯಬೇಕು. ನಾನು ಮತ್ತೆ ಬಂದಾಗ ನೀವು ಕನ್ನಡದಲ್ಲೇ ಮಾತಾಡಬೇಕು ಎಂದು ರೈಲ್ವೆ ಅಧಿಕಾರಿಗೆ ವಿ.ಸೋಮಣ್ಣ ಟಾಸ್ಕ್ ನೀಡಿದರು.
ವಿ.ಸೋಮಣ್ಣ ಹೇಳಿದ್ದೇನು?: ನವಂಬರ್ 15ರಂದು ಅಶೋಕಪುರಂ ರೈಲ್ವೆ ನಿಲ್ದಾಣವನ್ನ ಲೋಕಾರ್ಪಣೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ರೈಲ್ವೇ ಖಾತೆ ರಾಜ್ಯ ವಿ.ಸೋಮಣ್ಣ ತಿಳಿಸಿದರು.
ನಗರದ ಡಿ.ಆರ್.ಎಂ ಕಚೇರಿಯಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜೊತೆ ಕೇಂದ್ರ ಸಚಿವ ವಿ.ಸೋಮಣ್ಣ ಸಭೆ ನಡೆಸಿ ಚರ್ಚೆ ನಡೆಸಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಮತ್ತು ದೇಶದಲ್ಲಿ ರೈಲ್ವೆ ಅಭಿವೃದ್ಧಿ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿಯಾಗಿ ಆಯ್ಕೆ ಆದಾಗ ನಾನು ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಎಲ್ಲಾ ಸಾರಿಗೆಗಳಿಗಿಂತ ತುಂಬಾ ಜನರು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಮೈಸೂರು ವಿಭಾಗವನ್ನು ಬೆಂಗಳೂರು ರೀತಿಯಲ್ಲೇ ಅಭಿವೃದ್ಧಿಪಡಿಸುವ ಪ್ರಯತ್ನ ಮಾಡುತ್ತೇವೆ. ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಅನುದಾನ ಕೊಟ್ಟಿದೆ ಎಂದು ಹೇಳಿದರು.
2047ಕ್ಕೆ ಭಾರತದ ಬಗ್ಗೆ ಹೊರ ರಾಷ್ಟ್ರಗಳು ಮಾತನಾಡಬೇಕು ಎಂದು ಪ್ರಧಾನ ಮಂತ್ರಿಗಳು ಹೇಳುತ್ತಾರೆ. ಇನ್ನು ನಾನು ಇಂದು ಮೈಸೂರು ಅರಸರಾದ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ನೆನೆಸಿಕೊಳ್ಳಬೇಕು. ಯಾಕೆಂದರೆ ಅವರು 1880ರಲ್ಲಿ ಮೈಸೂರಿಗೆ ರೈಲ್ವೆಯನ್ನು ತಂದರು. ರಾಜ್ಯದಲ್ಲಿ ಪ್ರತಿವರ್ಷ 174 ಕಿಲೋ ಮೀಟರ್ ಹೆಚ್ಚಳ ಆಗುತ್ತಿದೆ. ಅಮೃತ ಭಾರತ್ ಯೋಜನೆಯಡಿ 15 ರೈಲ್ವೆ ನಿಲ್ದಾಣಗಳನ್ನು 2,000 ಕೋಟಿ ರೂಪಾಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದರು.
ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಮತ್ತಷ್ಟು ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ. ನಾಗನಹಳ್ಳಿ ಮೆಮೊ ಕೋಚಿಂಗ್ ಆಗುತ್ತಿದ್ದು, ಮೈಸೂರು, ಚಾಮರಾಜನಗರ, ಬೆಂಗಳೂರು, ತುಮಕೂರು ಮಾರ್ಗದ ಮೆಮೋ ರೈಲುಗಳನ್ನು ಇದೇ ತಿಂಗಳ 27ರಂದು ಉದ್ಘಾಟನೆ ಮಾಡಲಿದ್ದೇವೆ ಎಂದು ತಿಳಿಸಿದರು.












Click it and Unblock the Notifications