ಚುಂಚನಕಟ್ಟೆ ಜಾತ್ರೆಯಲ್ಲಿ ಸೀತಾಕಲ್ಯಾಣೋತ್ಸವ: ಏನಿದರ ವಿಶೇಷ?
ಮೈಸೂರು, ಜನವರಿ 15: ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಸಂಕ್ರಾಂತಿ ಮಾರನೆಯ ದಿನ ಅಂದರೆ ಇಂದು ಜಾತ್ರೆ ಅಂಗವಾಗಿ ಶ್ರೀರಾಮದೇವರ ಬ್ರಹ್ಮರಥೋತ್ಸವ ನಡೆಯಲಿದ್ದು, ಈ ಕ್ಷಣಕ್ಕಾಗಿ ಸಹಸ್ರಾರು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಜಾತ್ರೆ ಅಂಗವಾಗಿ ಹಲವು ರೀತಿಯ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದ್ದು, ಪ್ರತಿ ದಿನವೂ ಒಂದೊಂದು ರೀತಿಯ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಭಕ್ತರು ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.
ಈಗಾಗಲೇ ಚುಂಚನಕಟ್ಟೆಯಲ್ಲಿ ಜಾನುವಾರು ಜಾತ್ರೆ ನಡೆಯುತ್ತಿದ್ದರೆ, ಮತ್ತೊಂದೆಡೆ ಬ್ರಹ್ಮರಥೋತ್ಸವದ ಪ್ರಯಕ್ತ ನಡೆಸಬೇಕಾದ ಕೈಂಕರ್ಯಗಳ ಕುರಿತಂತೆ ವಿಧಿವಿಧಾನಗಳು ನಡೆಯುತ್ತಿವೆ. ರಥೋತ್ಸವಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆಯೇ ದೇವರ ಉತ್ಸವ ಮೂರ್ತಿಗಳನ್ನು ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿ ಮೆರೆವಣಿಗೆಯಲ್ಲಿ ಕೆ.ಆರ್.ನಗರ ಲಕ್ಷ್ಮಿನಾರಾಯಣ ದೇವಾಲಯದಿಂದ ತರಲಾಗಿದ್ದು, ಅರ್ಕೇಶ್ವರ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಈ ಉತ್ಸವ ಮೂರ್ತಿಗಳನ್ನು ಕಾಲು ನಡಿಗೆಯ ಮೆರವಣಿಗೆಯಲ್ಲಿ ಚಂದಗಾಲು, ಹೆಬ್ಬಾಳು, ಸಿದ್ದನಕೊಪ್ಪಲು ಗೇಟ್, ಡಿ.ಕೆ.ಕೊಪ್ಪಲು, ಹೊಸಕೊಪ್ಪಲು, ಕೆಸ್ತೂರು ಗೇಟ್, ಶ್ರೀರಾಮಪುರದ ಮೂಲಕ ತಂದಿದ್ದು ವಿಶೇಷವಾಗಿದೆ.

ಇನ್ನು ದೇವರ ಮೂರ್ತಿಗಳನ್ನು ತರುವಾಗ ಮಾರ್ಗ ಮಧ್ಯೆ ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಪಾನಕ ವಿತರಿಸಿ ಅನ್ನ ಸಂತರ್ಪಣೆ ಮಾಡಿ ಶ್ರೀರಾಮನಿಗೆ ಜೈಕಾರ ಕೂಗಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದ್ದರು. ನಂತರ ದೇವಾಲಯಕ್ಕೆ ಆಗಮಿಸಿದ ಉತ್ಸವ ಮೂರ್ತಿಗಳನ್ನು ಸಿಇಓ ರಘು, ಪಾರುಪತ್ತೆದಾರ್ ಯೋಗೇಶ್, ಅರ್ಚಕರಾದ ವಾಸುದೇವನ್, ನಾರಾಯಣ್ ಅಯ್ಯಂಗಾರ್ ಅವರ ಉಸ್ತುವಾರಿಯಲ್ಲಿ ಅದ್ಧೂರಿಯಾಗಿ ಬರಮಾಡಿ ಕೊಂಡ ಬಳಿಕ ಉತ್ಸವ ಮೂರ್ತಿಗಳಿಗೆ ಸಂಪ್ರದಾಯದಂತೆ ಪೂಜೆಯನ್ನು ಸಲ್ಲಿಸಲಾಗಿತ್ತು.
ಈ ನಡುವೆ ಶ್ರೀರಾಮ ದೇವಾಲಯದಲ್ಲಿ ಸೀತಾ ಕಲ್ಯಾಣ ಕಾರ್ಯಕ್ರಮ ನಡೆಸಲಾಯಿತು. ಸಂಜೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರಾಮದೇವರನ್ನು ಪಲ್ಲಕ್ಕಿ ಮೂಲಕ ದೇವಾಲಯವನ್ನು ಪ್ರದಕ್ಷಿಣೆ ಹಾಕಿಸಿ ಕಾಶಿಯಾತ್ರೆ ಮುಗಿಸಿ ಮಂಟಪಕ್ಕೆ ಕರೆತರಲಾಯಿತು. ಈ ವೇಳೆ ಹೆಣ್ಣಿನ ಕಡೆಯವರಿಂದ ವರನನ್ನು ಮನೆ ತುಂಬಿಸಿ ಮಂಟಪದಲ್ಲಿ ಕುಳ್ಳರಿಸಲಾಯಿತು. ದೇವಾಲಯದ ಒಳ ಆವರಣದಲ್ಲಿ ಕಲ್ಯಾಣೋತ್ಸವ ನಡೆಸಲು ತುಂಬಾ ಕಿರಿದಾಗಿದ್ದ ಕಾರಣ ಇದೇ ಮೊದಲ ಬಾರಿಗೆ ಕಲ್ಯಾಣೋತ್ಸವವನ್ನು ದೇವಾಲಯದ ಮುಂಭಾಗ ಭವ್ಯ ಮಂಟಪದಲ್ಲಿ ನಡೆಸಿದ್ದು ನೆರೆದಿದ್ದ ಸಾರ್ವಜನಿಕರ ಭಕ್ತರ ಪ್ರಶಂಸೆಗೆ ಪಾತ್ರವಾಯಿತು.

ವಧು-ವರರ ಪರವಾಗಿ ಶಾಸಕ ಡಿ.ರವಿಶಂಕರ್ ಪತ್ನಿ ಸುನಿತಾ, ದೊಡ್ಡಸ್ವಾಮಿಗೌಡ, ತಹಶೀಲ್ದಾರ್ ನರಗುಂದ ಎಸ್.ಎನ್ ಎಸ್, ನೇತ್ರತಜ್ಞ ಶ್ರೀನಿವಾಸ್ ಕುಟುಂಬದವರು ಹಾಜರಿದ್ದು ಮದುವೆ ಶಾಸ್ತ್ರಗಳನ್ನು ಚಾಚೂತಪ್ಪದೇ ನೆರವೇರಿಸಿ ಸೀತಾ ಮಾತೆಗೆ ಮಾಂಗಲ್ಯಧಾರಣೆ ಮಾಡಿಸಲಾಯಿತು. ಈ ಸೀತಾಕಲ್ಯಾಣ ಮಾಡುವುದರಿಂದ ಮದುವೆಯಾಗದವರಿಗೆ, ಮಕ್ಕಳಾಗದವರಿಗೆ ಶುಭಫಲ ದೊರೆಯುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಹೀಗಾಗಿ ನೂರಾರು ಯುವಕ ಯುವತಿಯರು ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದರೆ, ಕಲ್ಯಾಣೋತ್ಸವದ ವೇದ-ಘೋಷಗಳನ್ನು ಆಗಮ ಪಂಡಿತರಾದ ಪ್ರೋ. ವೆಂಕಟೇಶಮೂರ್ತಿ ಮತ್ತು ವೇಣುಗೋಪಾಲ ನೇತೃತ್ವದ ತಂಡ ನೆರವೇರಿಸಲಾಯಿತು.












Click it and Unblock the Notifications