ಜೆಡಿಎಸ್‌ಗೆ ಬಿಸಿತುಪ್ಪವಾದ ಮೈಸೂರಿನ ಪಕ್ಷದ ನಾಯಕರು!
ಮೈಸೂರು, ಡಿಸೆಂಬರ್ 10; ಜೆಡಿಎಸ್ ವರಿಷ್ಠರ ನಿದ್ದೆಗೆಡಿಸಿರುವ ಮೈಸೂರು ಭಾಗದ ಜೆಡಿಎಸ್ ಶಾಸಕರ ನಡೆ ಇದೀಗ ಇನ್ನಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಜೆಡಿಎಸ್ ತೊರೆಯುವ ಮುನ್ಸೂಚನೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಶಾಸಕ ಜಿ. ಟಿ. ದೇವೇಗೌಡ ಪಕ್ಷದ ನಾಯಕರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ಈಗಾಗಲೇ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನದ ಬಾವುಟ ಹಾರಿಸಿರುವ ಉಭಯ ನಾಯಕರು ಕಾಂಗ್ರೆಸ್ ಕದತಟ್ಟಿದ್ದಾರೆ. ಇದರ ಬೆನ್ನಲ್ಲೇ ಇಬ್ಬರೂ ನಾಯಕರು ಜೆಡಿಎಸ್ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಎಂಎಲ್‌ಸಿ ಸಂದೇಶ್ ನಾಗರಾಜ್, "ಅಪ್ಪ ಹಾಗೂ ರೇವಣ್ಣ ಹಿಂದಿನ ದಿನ ಬಂದು ಪಕ್ಷದ ಬಿ-ಫಾರ್ಮ್ ಕೊಟ್ಟಿದ್ದರು. ಜೆಡಿಎಸ್ ಅವರೇ ನನ್ನ ಮನೆಬಾಗಿಲಿಗೆ ಬಂದಿದ್ದರು. ಆದರೆ ಅಪ್ಪ-ಮಕ್ಕಳು ಗುದ್ದಾಡಿಕೊಂಡು ನನಗೆ ಅವಮಾನ ಮಾಡಿದರು" ಎಂದು ಹೊಸ ಬಾಂಬ್ ಸಿಡಿಸಿದರು.

"ಚುನಾವಣೆಗೆ ನಿಂತರು ಸೋಲುತ್ತಾರೆ ಅಂತ ಗೊತ್ತಿತ್ತು, ಹೀಗಾಗಿ ಹಿಂದಿನ ದಿನ ಬಂದು ಬಿ ಫಾರಂ ಕೊಟ್ಟರು. ಆದರೆ ಮೈಸೂರು ಮಹಾರಾಜರ ಮಾತನ್ನು ಕೇಳಿಕೊಂಡು ಕೊಡಲಿಲ್ಲ. ನೀನು ಹೊಡೆದಂಗೆ ಮಾಡು ನಾನು ಅತ್ತಂಗೆ ಮಾಡುತ್ತೇನೆ ಅಂತ ಮಾಡಿದರು" ಎಂದು ಆರೋಪಿಸಿದರು.
"ಮೈಸೂರು ಮಹರಾಜ ಅಂದರೆ ಚಾಮರಾಜ ಒಡೆಯರ್ ಅಲ್ಲ. ನಮ್ಮಂತವರಲ್ಲೇ ಒಬ್ಬರು ಮಹಾರಾಜರಿದ್ದು, ಮಂತ್ರಿ, ಸೇನಾಧಿಪತಿ ಎಲ್ಲಾ ಅವರೆ. ಅವರೊಬ್ಬರೇ ಪಕ್ಷದಲ್ಲೇ ಉಳಿದುಕೊಳ್ಳುವುದು. ಎಲ್ಲರೂ ಪಕ್ಷದಿಂದ ಹೋಗಿರೋದು ಆ ಮಹಾರಾಜರಿಂದಲೇ" ಎಂದು ಶಾಸಕ ಸಾ. ರಾ. ಮಹೇಶ್ ಹೆಸರು ಹೇಳದೇ ಅವರನ್ನು 'ಮಹಾರಾಜ' ಎಂದು ಲೇವಡಿ ಮಾಡಿದರು.
"ಹಿಂದಿನ ಬಿ ಫಾರ್ಮ್ ಯಾರು ಕೊಟ್ಟಿದ್ದು ಎಲ್ಲವನ್ನು ತೋರಿಸುತ್ತೇನೆ. ಯಾರು ಯಾರಿಂದಲೂ ಯಾರನ್ನು ಮುಗಿಸಲು ಸಾಧ್ಯವಿಲ್ಲ. ಜನವರಿ 5ನೇ ತಾರೀಖು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಹೇಳುತ್ತೇನೆ. ನಂತರ ಯಾರನ್ನು ಯಾರು ಮುಗಿಸುತ್ತಾರೆ ಗೊತ್ತಾಗುತ್ತೆ" ಎಂದು ಸಂದೇಶ್ ನಾಗರಾಜ್ ಹೇಳಿದರು.
ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಮಾತನಾಡಿ, "ನನಗೇನು ಜೆಡಿಎಸ್ ಬಾಗಿಲು ಬಂದ್ ಮಾಡೋದು? ನಾನೇ ದೇವೇಗೌಡರ ಮನೆ ಬಾಗಿಲನ್ನು ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ, ಅಂದಿನಿಂದ ಬಾಗಿಲು ಹಾಕಿದ್ದರೋ, ತೆಗೆದಿದ್ದಾರೋ ನಾನ್ಯಾಕೆ ನೋಡಲಿ?" ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಒಟ್ಟಾರೆ ಉಭಯ ಜೆಡಿಎಸ್ ನಾಯಕರ ಮಾತಿನ ಸಮರ ಮುಂದುವರಿದಿದ್ದು, ಇದು ಎಲ್ಲಿಗೆ ಹೋಗಿ ತಲುಪಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications