ಮೈಸೂರಿನ ಕಲಾ ಸುರುಚಿಯಲ್ಲಿ ಮತ್ತೆ ಸಾಹಿತ್ಯ ಚಾವಡಿ ಶುರು: ಏನಿದರ ವಿಶೇಷ?
ಮೈಸೂರು, ಅಕ್ಟೋಬರ್ 24: ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ಮುಖಾಮುಖಿ ಚರ್ಚೆಯ ಮೂಲಕ ಹಿರಿಯ ಮತ್ತು ಕಿರಿಯ ಸಾಹಿತಿಗಳೊಂದಿಗೆ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ಸಾಹಿತ್ಯದ ವಾತಾವರಣವನ್ನು ನಿರ್ಮಿಸುವ ಕೆಲಸವನ್ನು ಮೈಸೂರಿನ ಕುವೆಂಪು ನಗರದಲ್ಲಿರುವ ಕಲಾಸುರುಚಿ ಮಾಡುತ್ತಾ ಬಂದಿದೆ. ಜೊತೆಗೆ ಸಾಹಿತ್ಯದ ಬೆಳವಣಿಗೆಗೂ ತನ್ನದೇ ಕೊಡುಗೆಯನ್ನು ನೀಡುತ್ತಿರುವುದು ವಿಶೇಷವಾಗಿದೆ.
ಎಲ್ಲೋ ಒಂದು ಕಡೆ ಸಾಹಿತ್ಯ ಚಟುವಟಿಕೆಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆಯೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಈ ಕಾಲದಲ್ಲಿ ಸಾಹಿತ್ಯ ಚಾವಡಿಯ ಮೂಲಕ ಒಂದು ಗೂಡಿಸಿ ಚರ್ಚೆಗೆ ದೂಡುವುದು ಆ ಮೂಲಕ ಹೊಸ ಸಾಹಿತ್ಯ ಸೃಷ್ಟಿಗೂ ಮತ್ತು ಸಾಹಿತಿಗಳು ಓದುಗರ ನಡುವೆ ಸಂಬಂಧದ ಸೇತುವೆ ನಿರ್ಮಾಣಕ್ಕೂ ಇದು ಸಾಧ್ಯವಾಗಿದೆ.

ಮೈಸೂರಿನ ಕುವೆಂಪುನಗರದ ಸಿಂಧುವಳ್ಳಿ ಅನಂತಮೂರ್ತಿ ಅವರ ಸುರುಚಿ ರಂಗಮನೆಯಲ್ಲಿ 30-3-2008 ರಲ್ಲಿ ಸಾಹಿತ್ಯ ಚಾವಡಿಯು ಪ್ರಾರಂಭವಾಯಿತು. ಪ್ರತಿ ತಿಂಗಳ ಕೊನೆಯ ಭಾನುವಾರ ಈ ನಾಡಿನ ಹಿರಿ ಕಿರಿಯ ಸಾಹಿತಿಗಳೊಡನೆ ಸಾಹಿತ್ಯಾಸಕ್ತರು ಸೇರಿ ಸ್ಪಂದಿಸುತ್ತಾ ತೆರೆದ ಮುಖಾಮುಖಿ ಚರ್ಚೆಯಾಗುತ್ತಿತ್ತು. ವರ್ಷದಲ್ಲಿ ಒಂದೆರಡು ಬಾರಿ 'ಸಾಹಿತಿ ಮತ್ತು ಬದುಕು' ಎನ್ನುವ ವಿಶೇಷ ಕಾರ್ಯಕ್ರಮವೂ ನಡೆಯುತ್ತಿತ್ತು. ಇದರಲ್ಲಿ ನಾಡಿನ ಸಾಹಿತ್ಯ ಸಾಧಕರು ಭಾಗವಹಿಸುತ್ತಿದ್ದರು.
150ನೇ ಮಾಸಿಕ ಸಾಹಿತ್ಯ ಚಾವಡಿ
ಈ ಕಾರ್ಯಕ್ರಮದಲ್ಲಿ ಸಾಹಿತಿಗಳ ಸಾಹಿತ್ಯ ಸಾಧನೆ ಮತ್ತು ಬದುಕಿನ ಬಗ್ಗೆ ಮುಕ್ತ ಚರ್ಚೆಯಾಗುತ್ತಿತ್ತು. ಈ ಚಾವಡಿಯು ನಿರಂತರ 145 ತಿಂಗಳುಗಳವರೆಗೆ ಕ್ರಿಯಾಶೀಲವಾಗಿದ್ದು, ಕೊರೊನಾ ಸಮಯದಲ್ಲಿ ಸ್ಥಗಿತಗೊಂಡಿತು. ಆ ನಂತರ ಮತ್ತೆ ಪ್ರಾರಂಭವಾದರೂ ಪ್ರತಿ ತಿಂಗಳ ಕಾರ್ಯಕ್ರಮದ ನಿರಂತರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಇದನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ಮತ್ತೆ ಮಾಡಲಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.

ಈ ಬಾರಿ ಮತ್ತೆ 27 ಅಕ್ಟೋಬರ್ 2024 ರಂದು ಬೆಳಿಗ್ಗೆ 10.30ಕ್ಕೆ ಸಾಹಿತಿ ವಸುಧೇಂದ್ರ ಅವರ ಹೊಸ ಕಾದಂಬರಿ 'ರೇಷ್ಮೆ ಬಟ್ಟೆ' ಬಗ್ಗೆ ಸಂವಾದವನ್ನು ಏರ್ಪಡಿಸಲಾಗಿದೆ. ಇದು 150 ನೇ ಮಾಸಿಕ ಸಾಹಿತ್ಯ ಚಾವಡಿಯಾಗಿದೆ ಎನ್ನುವುದೇ ಖುಷಿಯ ವಿಚಾರವಾಗಿದೆ. ವಿಶ್ವವಿದ್ಯಾಲಯ, ಸಂಘ ಸಂಸ್ಠೆಗಳು ಅಥವಾ ಸರಕಾರದ ನೆರವಿಲ್ಲದೆ ಜನಸಾಮಾನ್ಯ ಸಾಹಿತ್ಯ ಚಿಂತಕರ ಸಹ ಸ್ಪಂದನ ವೇದಿಕೆಯಾಗಿ ಕ್ರಿಯಾಶೀಲವಾಗುವ ಆದರ್ಶದೊಂದಿಗೆ ಮತ್ತೆ ಅಭಿಯಾನವನ್ನು ಪ್ರಾರಂಭಿಸಿರುವ ಈ ಚಾವಡಿಯನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಸಮಾಜಕ್ಕಿದೆ ಎಂದು ನಂಬಲಾಗಿದೆ ಎನ್ನುವುದು ಕಲಾಸುರುಚಿ ಬಳಗದ ಆಶಯವಾಗಿದೆ.
'ರೇಷ್ಮೆ ಬಟ್ಟೆ' ಕಾದಂಬರಿಯ ಸಂವಾದ
ಈ ಬಾರಿಯ ಸಾಹಿತ್ಯಚಾವಡಿಯಲ್ಲಿ ವಸುಧೇಂದ್ರ ಅವರು ಪಾಲ್ಗೊಳ್ಳುತ್ತಿದ್ದು ಅವರ ಬಗ್ಗೆ ಹೇಳಬೇಕೆಂದರೆ, ವಸುಧೇಂದ್ರ ಕನ್ನಡದ ಹಿರಿಯ ಲೇಖಕರು. ಅವರು ತಮ್ಮ ಕಥೆ ಮತ್ತು ಕಾದಂಬರಿಗಳಿಂದ ಪ್ರಸಿದ್ಧರಾಗಿದ್ದಾರೆ. ಅವರ ಅನೇಕ ಪುಸ್ತಕಗಳು ಮರು ಮುದ್ರಣಗಳನ್ನು ಕಂಡಿದ್ದು ವಿಮರ್ಶಕರ ಮತ್ತು ಓದುಗರ ಮನ್ನಣೆ ಪಡೆದಿವೆ. ಅವರ " ಮೋಹನಸ್ವಾಮಿ " ಅನೇಕ ಭಾಷೆಗಳಿಗೆ ಅನುವಾದ ವಾಗಿದ್ದು, ಕನ್ನಡದ ಹೊರಗೂ ಜನಪ್ರಿಯತೆ ಗಳಿಸಿದೆ.
ಇತ್ತೀಚೆಗೆ ಅವರು ಬರೆದ ಕಾದಂಬರಿ 'ತೇಜೋ ತುಂಗಭದ್ರಾ'ದಲ್ಲಿ ಕರ್ನಾಟಕ ಮತ್ತು ಪೋರ್ಚುಗಲ್ ಗಳನ್ನು ಬೆಸೆಯುವ, ವಿಜಯನಗರದ ಉತ್ತುಂಗ ಕಾಲದ ಕಥೆಯನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನವಿದೆ. ಅವರ ಮೊತ್ತ ಮೊದಲ ಕೃತಿ 'ನಮ್ಮಮ್ಮ ಅಂದ್ರೆ ನನಗಿಷ್ಟ' ಇಂದಿಗೂ ಜನಪ್ರಿಯವಾಗಿದೆ. ಕರ್ನಾಟಕ ಅಕಾಡೆಮಿ, ಮತ್ತು ಯು. ಆರ್ ಅನಂತಮೂರ್ತಿ ಪ್ರಶಸ್ತಿಗಳನ್ನು ಒಳಗೊಂಡು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ವಸುಧೇಂದ್ರ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಪ್ರವಾಸ ಪ್ರಿಯರಾಗಿರುವುದರಿಂದ ದೇಶ ವಿದೇಶಗಳನ್ನು ಸುತ್ತುವುದರಲ್ಲಿ ಆಸ್ಥೆ ಇರಿಸಿಕೊಂಡಿದ್ದಾರೆ. ಐಟಿ ಕ್ಷೇತ್ರದಲ್ಲಿ 20 ವರ್ಷ ಇದ್ದ ಶ್ರೀಯುತರು ಈಗ ತಮ್ಮದೇ ಪ್ರಕಾಶನ ಸಂಸ್ಥೆ ಛಂದವನ್ನು ನಡೆಸುತ್ತ, ಆಪ್ತಸಮಾಲೋಚಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ವಸುಧೇಂದ್ರ ಅವರ ಚಾರಣ ಪ್ರೀತಿ ಅವರನ್ನು ಪ್ರಪಂಚದ ಎಲ್ಲ ಕಡೆ ಕರೆದೊಯ್ದಿದೆ. ತಾಂಜಾನಿಯಾದ ಕಿಲಿಮಾಂಜರೋ ಪರ್ವತ ಮತ್ತು ಹಿಮಾಲಯದ ಅನೇಕ ಪರ್ವತಗಳನ್ನು ಹತ್ತಿದ ಉತ್ಸಾಹಿ ವಸುಧೇಂದ್ರ ತಮ್ಮ ಬಿಡುವಿನ ವೇಳೆಯಲ್ಲಿ ಅಭಿಜಾತ ಸಂಗೀತ ಕೇಳಲು ಬಯಸುತ್ತಾರೆ. ಇವರು ಈ ಬಾರಿಯ ಅತಿಥಿಯಾಗಿದ್ದಾರೆ ಎನ್ನುವುದು ಖುಷಿಯ ವಿಚಾರವಾಗಿದೆ.












Click it and Unblock the Notifications