ಉತ್ತರ ಭಾರತದ ರೀಸಸ್ ಮಂಕಿ ನಾಗರಹೊಳೆಯಲ್ಲಿ ಪ್ರತ್ಯಕ್ಷ!
ಮೈಸೂರು, ಫೆಬ್ರವರಿ 11; ಉತ್ತರ ಭಾರತದಲ್ಲಿ ಹೆಚ್ಚು ಕಾಣಸಿಗುವ ಕರ್ನಾಟಕದಲ್ಲಿ ಅಪರೂಪ ಎನಿಸಿರುವ ರೀಸಸ್ ಮಂಕಿ (ರೀಸಸ್ ಮೆಕಾಕ್) ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಕರ್ನಾಟಕದ ಮೃಗಾಲಯಗಳಲ್ಲಿ ಮಾತ್ರ ಕಾಣಸಿಗುವ ಈ ರೀಸಸ್ ಮಂಕಿ ನಾಗರಹೊಳೆ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್‌ನಿಂದ ಕುಟ್ಟಿಗೆ ತೆರಳುವ ಮಾರ್ಗದಲ್ಲಿ ಮೂರ್ಕಲ್ ಸಮೀಪ ಮುಖ್ಯ ರಸ್ತೆಯಲ್ಲೇ ಅರಣ್ಯ ಇಲಾಖೆ ಸಾರಿಗೆ ಬಸ್ ಹಾಗೂ ಜೆಎಲ್‌ಆರ್ ಕಿಂಗ್ಸ್‌ನಿಂದ ಬಂದಿದ್ದ ಪ್ರವಾಸಿಗರಿಗೆ ರೀಸಸ್ ಮಂಕಿ ದರ್ಶನ ನೀಡಿದೆ.
ಏನಿದು ರೀಸಸ್ ಮಂಕಿ?: ಉತ್ತರ ಹಾಗೂ ಮಧ್ಯ ಭಾರತದಲ್ಲಿ ಸಾಮಾನ್ಯವಾಗಿ ಇದು ಕಾಣ ಸಿಗುತ್ತದೆ. ಅದರಲ್ಲೂ ಆಂಧ್ರ ಹಾಗೂ ತೆಲಂಗಾಣದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಆದರೆ, ಇದೀಗ ನಾಗರಹೊಳೆಗೆ ರೀಸಸ್ ಮಂಕಿ ಹೇಗೆ ಬಂತು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸ್ಥಳೀಯ ಕೋತಿಗಳಿಗೂ ಈ ರೀಸಸ್ ಮಂಕಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿಂಭಾಗ ಕಂದು ಬಣ್ಣದಿಂದ ಕೂಡಿರುತ್ತದೆ. ಹೆಚ್ಚು ಕೂದಲು ಹೊಂದಿರುವ ಈ ಕೋತಿ ತಲೆ ಮೇಲಿನ ಕೂದಲು ಕ್ಯಾಪ್‌ನಂತೆ ಕಾಣುತ್ತದೆ. ಬಾಲವೂ ಸ್ವಲ್ಪ ಚಿಕ್ಕದಾಗಿರುತ್ತದೆ.
ಉತ್ತರ ಭಾರತವಲ್ಲದೇ ನೇಪಾಳ, ದಕ್ಷಿಣ ಚೀನಾ, ಆಗ್ನೇಯ ಏಷ್ಯಾದಲ್ಲೂ ಇವುಗಳ ಸಂತತಿ ಹೆಚ್ಚಾಗಿ ಕಂಡು ಬರುತ್ತದೆ. ಸದ್ಯ ಆಂಧ್ರದಿಂದ ಕೆಳಭಾಗಕ್ಕೂ ಇದರ ಸಂತತಿ ಬರುತ್ತಿದ್ದು, ತನ್ನ ಆವಾಸ ಸ್ಥಾನ ವಿಸ್ತರಿಸಿಕೊಳ್ಳುತ್ತಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಏನಿದರ ವಿಶೇಷ?: ಗಟ್ಟಿಮುಟ್ಟಾಗಿ ಕಾಣುವ ರೀಸಸ್ ಮಂಕಿ ಹೆಚ್ಚು ಬುದ್ಧಿವಂತ, ಉತ್ಸಾಹ ಭರಿತ ಪ್ರಾಣಿ. ಗಂಡು ಕೋತಿ ಬೆಳೆಯುತ್ತಿದ್ದಂತೆ ಗುಂಪು ತೊರೆದರೆ, ಹೆಣ್ಣು ಮಂಕಿ ಗುಂಪಿನಲ್ಲಿ ಇರಲು ಇಷ್ಟಪಡುತ್ತದೆ. ಸಾಮಾನ್ಯವಾಗಿ 20 ರಿಂದ 200 ಸಂಖ್ಯೆಯ ಗುಂಪಿನಲ್ಲಿ ರೀಸಸ್ ಮಂಕಿ ಇರುತ್ತದೆ.

"ಸಾಮಾನ್ಯವಾಗಿ ಬೃಹತ್ ವಾಹನಗಳಲ್ಲಿ ಆಹಾರ ಪದಾರ್ಥಗಳು ಇರಬಹುದೆಂದು ಮರದ ಮೇಲಿಂದ ಹಾರಿ ಕುಳಿತುಕೊಂಡು ನಾಗರಹೊಳೆಗೆ ಬಂದಿರುವ ಶಂಕೆಯೂ ಇದೆ. ಸದ್ಯ ನಾಗರಹೊಳೆಯಲ್ಲಿ ಕಾಣಿಸಿಕೊಂಡಿರುವ ರೀಸಸ್ ಮಂಕಿ ಒಂಟಿಯಾಗಿದೆ. ಬೇರೆ ಕೋತಿಗಳು ಇದನ್ನು ಸೇರಿಸಿಕೊಂಡಿಲ್ಲ ಎನಿಸುತ್ತದೆ" ಎಂದು ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಷನ್ ಮುಖ್ಯಸ್ಥ ರಾಜಕುಮಾರ್ ತಿಳಿಸಿದ್ದಾರೆ.












Click it and Unblock the Notifications