ಚಾಮುಂಡಿಬೆಟ್ಟದಲ್ಲೀಗ ರಥೋತ್ಸವದ ಸಂಭ್ರಮ.. ಇಲ್ಲಿನ ವಿಶಿಷ್ಟ ಪದ್ಧತಿ ಬಗ್ಗೆ ನೀವು ತಿಳಿಯಲೇಬೇಕು?
ಮೈಸೂರು, ಅಕ್ಟೋಬರ್, 13: ಯದುಕುಲವಂಶದ ಅಧಿದೇವತೆ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲೀಗ ರಥೋತ್ಸವದ ಸಂಭ್ರಮ ಮನೆ ಮಾಡಿದೆ. ಕಳೆದ ಮೂರು ದಿನಗಳಿಂದ ರಥೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಂಡಿದ್ದು, ಅಕ್ಟೋಬರ್ 16ರಂದು ಮಹಾರಥೋತ್ಸವ ನಡೆಯಲಿದೆ.
ಈ ಜಾತ್ರೆಯ ಕಾರ್ಯಕ್ರಮಗಳು ಅಕ್ಟೋಬರ್ 20ರ ವರೆಗೆ ನಡೆಯಲಿವೆ. ಇದೀಗ ದಸರಾ ಮುಕ್ತಾಯವಾಗಿದ್ದು, ಮೈಸೂರಿಗೆ ಆಗಮಿಸಿರುವ ಭಕ್ತರು ಸೇರಿದಂತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿರುವುದು ಕಂಡು ಬರುತ್ತಿದೆ.

ಪ್ರತಿ ವರ್ಷವೂ ಇದೇ ಸಮಯದಲ್ಲಿ ತಾಯಿ ಚಾಮುಂಡೇಶ್ವರಿಯ ರಥೋತ್ಸವ ನಡೆಯುತ್ತಿದ್ದು, ಈ ಬಾರಿ ಅಕ್ಟೋಬರ್ 11ರ ಅಶ್ವಯುಜ ಶುಕ್ಲ ಅಷ್ಟಮಿ ಉಪರಿ ನವಮಿ ಉತ್ತರಾಷಾಡ ನಕ್ಷತ್ರದಲ್ಲಿ ಮೃತಿಕಾ ಸಂಗ್ರಹಣ ಪೂರ್ವಕ ಅಂಕುರಾರ್ಪಣೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಅಕ್ಟೋಬರ್ 12 ರಂದು ಅಶ್ವಯುಜ ಶುಕ್ಲ, ದಶಮಿ ಶ್ರವಣ ಧ್ವಜಾರೋಹಣ ಹಾಗೂ ರಾತ್ರಿ ಭೇರಿತಾಡನ ಹಾಗೂ 13ರಂದು ಏಕಾದಶಿ ಧನಿಷ್ಟ ನಕ್ಷತ್ರ ಚಾಮರಾಜ ಮುಡಿಧಾರಣೆ, ಪುಷ್ಪ ಮಂಟಪಾರೋಹಣ ನಡೆದಿದೆ.
ಅಕ್ಟೋಬರ್ 14ರಂದು ದ್ವಾದಶಿ ಶತಭಿಷ ನಕ್ಷತ್ರ ವೃಷಭ ವಾಹನ, 15ರಂದು ಅಶ್ವಯುಜ ಶುಕ್ಲ ತ್ರಯೋದಶಿ ಪೂರ್ವಭಾದ್ರ ನಕ್ಷತ್ರ ಕಳಶಾರೋಹಣ, ಗಜಾರೋಹಣ, 16ರಂದು ಬೆಳಗ್ಗೆ 9:15ರಿಂದ 9:45 ಗಂಟೆಗೆ ಶ್ರೀಮದ್ ದಿವ್ಯ ರಥೋತ್ಸವ ನಡೆಯಲಿದೆ. ನಂತರ ಸಾಯಂಕಾಲ ಸಿಂಹ ವಾಹನೋತ್ಸವ, ಹಂಸವಾಹನೋತ್ಸವ, ಮಂಟಪೋತ್ಸವ ನಡೆಯಲಿದೆ.
ಬಳಿಕ ಅಕ್ಟೋಬರ್ 17ರಂದು ಅಶ್ವಯುಜ ಕೃಷ್ಣ ಪೂರ್ಣಿಮಾ ರೇವತಿ ನಕ್ಷತ್ರ ಅಶ್ವಾರೋಹಣ ನಡೆಯಲಿದೆ. ಅಕ್ಟೋಬರ್ 18ರಂದು ಬೆಳಗ್ಗೆ ವಸಂತ ಪೂಜೆ, ಅವಭೃತ ತೀರ್ಥ ಸ್ನಾನ ಮಂಟಪೋತ್ಸವ, ಸಾಯಂಕಾಲ 7 ಗಂಟೆಗೆ ತೆಪ್ಪೋತ್ಸವ, ಅಂದೋಳಿಕಾರೋಹಣ, ಧ್ವಜಾವರೋಹಣ, 19ರಂದು 'ಶಯನೋತ್ಸವ' ಹಾಗೂ 20ರಂದು ಬೆಳಗ್ಗೆ ಮಹಾಭಿಷೇಕ ಮತ್ತು ರಾತ್ರಿ ಮುಡಿ ಉತ್ಸವದೊಂದಿಗೆ ರಥೋತ್ಸವದ ಸಂಬಂಧ ಕಾರ್ಯಕ್ರಮಗಳಿಗೆ ತೆರೆಬೀಳಲಿದೆ.
ಮಹಿಸಾಸುರನ ಸಂಹರಿಸಿದ ಚಾಮುಂಡೇಶ್ವರಿ: ಇದೆಲ್ಲದರ ನಡುವೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಬಗ್ಗೆಯೂ ಒಂದಿಷ್ಟು ಹೇಳಬೇಕಾಗುತ್ತದೆ. ಇಲ್ಲಿ ಪ್ರತಿನಿತ್ಯವೂ ತಾಯಿ ಚಾಮುಂಡೇಶ್ವರಿಗೆ ಪೊಲೀಸ್ ಸೆಲ್ಯೂಟ್ ನಡೆಯುತ್ತದೆ ಎಂದರೆ ಅಚ್ಚರಿಯಾಗಬಹುದು, ಆದರೆ ಇದು ಸತ್ಯವಾಗಿದೆ.
ಚಾಮುಂಡೇಶ್ವರಿ ಮಹಿಸಾಸುರನ ವಧಿಸಿದ ಕಥೆ ಪುರಾಣದಲ್ಲಿದೆ. ಅದರಂತೆಯೇ ಸಾಕ್ಷಾತ್ ಪರಶಿವನಿಂದ ಯಾವ ಗಂಡಸಿಂದಾಗಲಿ, ಯಾವ ಪ್ರಾಣಿಯಿಂದಾಗಲಿ ತನಗೆ ಮರಣ ಬಾರದಂತೆ ವರಪಡೆದಿದ್ದ ಮಹಿಷಾಸುರ ಜನರಿಗೆ ಹಾಗೂ ಋಷಿ ಮುನಿಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಾ ಯಜ್ಞಯಾಗಾದಿಗಳಿಗೆ ಅಡ್ಡಿಪಡಿಸುತ್ತಿದ್ದನು.
ಮಹಿಷಾಸುರನ ಉಪಟಳ ತಾಳಲಾರದ ಋಷಿಮುನಿಗಳು ಮತ್ತು ದೇವತೆಗಳು ತಮ್ಮನ್ನು ಪಾರು ಮಾಡುವಂತೆ ಶಿವನ ಮೂಲಕ ಪಾರ್ವತಿಗೆ ಮೊರೆಹೋದರು. ಈ ವೇಳೆ ಪಾರ್ವತಿ ಚಾಮುಂಡೇಶ್ವರಿ ಅವತಾರ ತಾಳಿ ತನ್ನ ಹದಿನೆಂಟು ಕರಗಳಲ್ಲೂ ಎಲ್ಲಾ ದೇವತೆಗಳಿಂದ ಪಡೆದ ಹದಿನೆಂಟು ಆಯುಧಗಳನ್ನು ಹಿಡಿದು ಕಮಲ, ಅಕ್ಷರಮಾಲೆ, ಬಾಣ, ಖಡ್ಗ, ವಜ್ರ, ಗದೆ, ತ್ರಿಶೂಲ, ಚಕ್ರ, ಪರಶು, ಘಂಟೆ, ಪಾಶ, ಶಕ್ತಿ, ದಂಡ, ಚರ್ಮ, ಧನಸ್ಸು, ಪಾನಪಾತ್ರೆ, ಕಮಂಡಲಗಳೊಡನೆ ದಿವ್ಯಾಭರಣಗಳಿಂದ ಅಲಂಕೃತಳಾಗಿ ಹಿಮವಂತ ನೀಡಿದ ಸಿಂಹವನ್ನೇರಿ ಉಗ್ರಸ್ವರೂಪಿಣಿಯಾಗಿ ಬಂದು ಲೋಕಕಂಟಕನಾಗಿದ್ದ ದುಷ್ಟ ಮಹಿಷಾಸುರವನ್ನು ಸಂಹಾರ ಮಾಡಿದಳು.
ಯದುವಂಶದ ಕುಲದೇವತೆಯಾದ ಚಾಮುಂಡೇಶ್ವರಿ: ಈ ಪುರಾಣದ ಕಥೆಯಂತೆ ದುಷ್ಟರ ಶಿಕ್ಷಕಳಾಗಿ, ಶಿಷ್ಟರ ರಕ್ಷಕಳಾಗಿ ಚಾಮುಂಡೇಶ್ವರಿ ಇಂದಿಗೂ ಸರ್ವರನ್ನು ಕಾಪಾಡುತ್ತಾ ಬರುತ್ತಿದ್ದಾಳೆ. ಯದುವಂಶಸ್ಥರಾದ ಮೈಸೂರು ಮಹಾರಾಜರು ತಮ್ಮ ಕುಲದೇವತೆಯಾಗಿ ಚಾಮುಂಡೇಶ್ವರಿಯನ್ನು ಸ್ವೀಕರಿಸಿದ ಕಾರಣದಿಂದಾಗಿ ಚಾಮುಂಡಿಬೆಟ್ಟ ಮತ್ತು ಅಮ್ಮನವರ ದೇಗುಲ ಬಹುಬೇಗ ಪ್ರವರ್ಧಮಾನಕ್ಕೆ ಬಂದು ಅತ್ಯಂತ ವೈಭವವನ್ನು ಪಡೆಯುವಂತಾಯಿತು. ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ದೇಗುಲದ ಹೆಬ್ಬಾಗಿಲು, ಪ್ರವೇಶದ್ವಾರ, ನವರಂಗ, ಒಳಾಂಗಣ, ಗರ್ಭಗುಡಿ ಮತ್ತು ಪ್ರಕಾರಗಳನ್ನು ಹೊಂದಿದೆ.
ಮಹಾದ್ವಾರದ ಮೇಲೆ ಸುಂದರವಾದ ಗಗನಚುಂಬಿ ಗೋಪುರ ಮತ್ತು ಗರ್ಭಗುಡಿಯ ಮೇಲೆ ವಿಮಾನ ಶಿಖರಗಳಿವೆ. ದೇವಾಲಯವು ಏಳು ಅಂತಸ್ತುಗಳುಳ್ಳ ಗೋಪುರವಾಗಿದ್ದು, 19ನೇ ಶತಮಾನದಲ್ಲಿ ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಗೋಪುರದ ಮೇಲೆ ಏಳು ಚಿನ್ನದ ಕಳಶಗಳಿವೆ. 1827ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಈ ದೇವಸ್ಥಾನವನ್ನು ಆಸಕ್ತಿಯಿಂದ ಜೀರ್ಣೋದ್ಧಾರ ಮಾಡಿ ಮಹಾದ್ವಾರದ ಮೇಲೆ ಈ ಬೃಹತ್ ಗೋಪುರಗಳನ್ನು ಕಟ್ಟಿಸಿದ್ದಾರೆ.
ತಾಯಿ ಚಾಮುಂಡೇಶ್ವರಿಗೆ ಪೊಲೀಸ್ ಸೆಲ್ಯೂಟ್: ಇಲ್ಲಿ ಸಿಂಹವಾಹಿನಿಯಾದ ಚಾಮುಂಡಿ ತಾಯಿಗೆ ಚೆಂದದ ಸಿಂಹವಾಹನವೊಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾರೆ. ಈ ಸಿಂಹವಾಹನವನ್ನು ಅಂದಿನಿಂದ ಇಂದಿನತನಕವೂ ಚಾಮುಂಡೇಶ್ವರಿ ರಥೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿದೆ. ಇದೆಲ್ಲದರ ನಡುವೆ ತಾಯಿ ಚಾಮುಂಡೇಶ್ವರಿಗೆ ಪ್ರತಿದಿನವೂ ಪೊಲೀಸರಿಂದ ವಂದನೆ ಸಲ್ಲಿಸುವ ಪದ್ಧತಿಯಿದೆ. ಇದೊಂದು ಅಪರೂಪದ ಸಂಪ್ರದಾಯ ಎಂದರೆ ತಪ್ಪಾಗಲಾರದು. ಮೈಸೂರು ಮಹಾರಾಜರ ಕಾಲದಲ್ಲಿ ಆರಂಭಗೊಂಡ ಈ ಪದ್ಧತಿ ಇಂದಿಗೂ ಮುಂದುವರೆದಿದೆ.
ಈ ಹಿಂದೆ ರಾಜರೊಂದಿಗೆ ಬರುತ್ತಿದ್ದ ಸಿಪಾಯಿಗಳು ಪೂಜೆಯ ಸಮಯದಲ್ಲಿ ತಾಯಿ ಚಾಮುಂಡೇಶ್ವರಿಗೆ ಬಂದೂಕು ಹಿಡಿದು ಸೆಲ್ಯೂಟ್ ಮಾಡಿ ತಮ್ಮ ವಂದನೆಯನ್ನು ಸಲ್ಲಿಸುತ್ತಿದ್ದರು. ಆದರೆ, ಸ್ವಾತಂತ್ರ್ಯ ಬಂದ ಬಳಿಕ ಇದೀಗ ಪೊಲೀಸರು ಮಾಡುತ್ತಿದ್ದಾರೆ. ಈಗ ಮೈಸೂರು ನಗರದ ಕೆ.ಆರ್.ಠಾಣೆಯ ಪೊಲೀಸ್ ಸಿಬ್ಬಂದಿ ದೇವಾಲಯದ ಒಳ ಆವರಣಕ್ಕೆ ಆಗಮಿಸಿ ಬಂದೂಕು ಹಿಡಿದು ವಂದನೆ ಸಲ್ಲಿಸುತ್ತಾರೆ. ದೇವಾಲಯದಲ್ಲಿ ಬೆಳಗ್ಗೆ 9:30 ಹಾಗೂ ರಾತ್ರಿ 8:30ಕ್ಕೆ ಮಹಾ ಮಂಗಳಾರತಿ ಮಾಡುವ ವೇಳೆ ಪೊಲೀಸರು ಚಾಮುಂಡೇಶ್ವರಿಗೆ ವಂದನೆ ಸಲ್ಲಿಸುತ್ತಾರೆ.












Click it and Unblock the Notifications