ನಂಜುಂಡೇಶ್ವರನ ಹರಕೆ ತೀರಿಸಿದ ರಮೇಶ್ ಜಾರಕಿಹೊಳಿ
ಮೈಸೂರು, ಜನವರಿ 29: ತಮ್ಮ ಇಷ್ಟಾರ್ಥ ನೆರವೇರಿಸಿದ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರು ನಿನ್ನ ನಂಜನಗೂಡಿಗೆ ಆಗಮಿಸಿ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ್ದು, ಅವರೊಂದಿಗೆ ಮಹೇಶ್ ಕುಮಟಹಳ್ಳಿ, ಶ್ರೀಮಂತ ಪಾಟೀಲ, ಆರ್.ಶಂಕರ್, ಮಾಜಿ ಶಾಸಕ ನಾಗರಾಜು ಜತೆಗಿದ್ದರು.
ಈ ಹಿಂದೆ ಅನರ್ಹರಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮಟ್ಟಿಲೇರಿದ್ದ ವೇಳೆ ನಂಜನಗೂಡಿಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಅವರು ತೀರ್ಪು ಬಂದ ಬಳಿಕ ಸನ್ನಿಧಿಗೆ ಬರುವುದಾಗಿ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಅವರು ಮಂಗಳವಾರ ದೇವಾಲಯಕ್ಕೆ ಆಗಮಿಸಿ ನಂಜುಂಡೇಶ್ವರ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದ ನಂತರ ಸ್ವಲ್ಪ ಹೊತ್ತು ಗರ್ಭ ಗುಡಿಯ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, "ನಾನು ಸುಪ್ರೀಂ ತೀರ್ಪಿನ ಸಂದರ್ಭದಲ್ಲಿ ನಂಜುಂಡನ ಬಳಿ ಬೇಡಿಕೊಂಡಿದ್ದೆ. ತೀರ್ಪು ಏನೇ ಬಂದರೂ ಮತ್ತೆ ಬರುವುದಾಗಿ ಪ್ರಾರ್ಥನೆ ಮಾಡಿದ್ದೆ. ಈಗ ಅದು ಈಡೇರಿದ್ದರಿಂದ ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದೇನೆ" ಎಂದು ಹೇಳಿದರು. "ನಾನೇನು ಡಿಸಿಎಂ ಸ್ಥಾನ ಕೇಳಿಲ್ಲ. ಯಾವುದೇ ಖಾತೆ ಕೊಟ್ಟರು ನನ್ನ ಅಭ್ಯಂತರವಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನನಗೆ ಅವಸರವೂ ಇಲ್ಲ. ಇಂತಹದೇ ಖಾತೆ ಕೊಡಬೇಕೆಂದು ಕೂಡ ಕೇಳಿಲ್ಲ. ಸಿಎಂ ಅವರು ಸಚಿವ ಸ್ಥಾನ ಕೊಟ್ಟರೂ ಕೊಡದೆ ಇದ್ದರೂ ಬೇಜಾರಿಲ್ಲ" ಎಂದರು.

"ಪಕ್ಷದಿಂದ ನಿಂತು ಗೆದ್ದವರಿಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ. ಆದರೆ ಮಾಧ್ಯಮಗಳಲ್ಲಿ ಮಾತ್ರ ಐದಾರು ಮಂದಿಗೆ ಸಚಿವ ಸ್ಥಾನ ಅಂತ ತೋರಿಸಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಲಿ. ಇನ್ನು ಒಂದು ತಿಂಗಳು ಬಿಟ್ಟು ಬೇಕಾದರೂ ಆಗಲಿ ನನಗೇನು ಅವಸರವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಬರೀ 17 ಅಲ್ಲ ಬಿಜೆಪಿಯ 117 ಶಾಸಕರು ಒಟ್ಟಾಗಿದ್ದೇವೆ" ಎಂದು ಹೇಳಿದರು.
ವಿಶ್ವನಾಥ್ ನಮ್ಮ ಜೊತೆ ಬಂದಿದ್ದಕ್ಕೆ ನಮ್ಮ ತಂಡದ ತೂಕ ಹೆಚ್ಚಾಯಿತು. ಅವರು ನಮಗೆ ಒಳ್ಳೆಯ ಸಲಹೆ ಸೂಚನೆ ನೀಡಿದರು. ವಿಶ್ವನಾಥ್‌ಗೆ ಪಕ್ಷದ ವರಿಷ್ಠರು ಚುನಾವಣೆಗೆ ನಿಲ್ಲಬೇಡಿ ಎಂದರು. ನಾನು ಸಹ ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದೆ. ಆದರೂ ವಿಶ್ವನಾಥ್ ಅವರು ಚುನಾವಣೆ ನಿಂತು ಸೋತರು. ಆದರೆ ಅವರ ಹಿರಿತನಕ್ಕೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುವುದಾಗಿ ಹೇಳಿದರು.












Click it and Unblock the Notifications