Ram Mandir; ಮೈಸೂರಲ್ಲಿ ಬೆಳಗಿದ 111 ಅಡಿ ಉದ್ದದ ಅಗರಬತ್ತಿ
ಮೈಸೂರು, ಜನವರಿ 22: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಪೂಜಾ ವಿಧಿವಿಧಾನವನ್ನು ನೆರವೇರಿಸುತ್ತಿದ್ದಾರೆ.
ಅತ್ತ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದರೆ ಇತ್ತ ಮೈಸೂರಿನಲ್ಲಿ 111 ಅಡಿ ಉದ್ದದ ಅಗರಬತ್ತಿ ಬೆಳಗಿಸುವ ಕಾರ್ಯಕ್ರಮ ನಡೆಯಿತು. ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಈ ಅಗರತ್ತಿ ತಯಾರಿಸಲಾಗಿದೆ.

ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿ ವತಿಯಿಂದ ಸಿದ್ದಪಡಿಸಿರುವ 111 ಅಡಿ ಉದ್ದದ ಅಗರಬತ್ತಿ ಬೆಳಗಿಸುವ ಕಾರ್ಯಕ್ರಮ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಿತು. ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಸರಸ್ವತಿ ಅವರು 111 ಅಡಿ ಉದ್ದದ ಅಗರಬತ್ತಿಯನ್ನು ಬೆಳಗಿಸಿದರು. ಶಾಸಕ ಟಿ. ಎಸ್. ಶ್ರೀವತ್ಸ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2 ತಾಸು ಇಡಲು ಅವಕಾಶ; ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪರಂಪರಾ ಹೆಸರಿನಲ್ಲಿ 111 ಅಡಿ ಉದ್ದದ ಅಗರಬತ್ತಿಯನ್ನು ಬೆಳಗಿಸಲಾಗಿದೆ. ಇದನ್ನು 24 ದಿನಗಳ ಕಾಲ ಇಡಲು ಆಯೋಜಕರು ಅನುಮತಿ ಕೇಳಿದ್ದರು. ಆದರೆ ಪೊಲೀಸರು 2 ತಾಸು ಇಡಲು ಮಾತ್ರ ಅವಕಾಶ ನೀಡಿದ್ದಾರೆ.
ಈ ಅಗರಬತ್ತಿಯನ್ನು ಇದ್ದಿಲು, ಜಿಗಟು ಬಿದಿರು, ಶ್ರೀಗಂಧದ ಪುಡಿ, ಜೇನುತುಪ್ಪ, ಸಾಂಬ್ರಾಣಿ, ಬೆಲ್ಲ ಮುಂತಾದ ವಸ್ತುಗಳನ್ನು ಬಳಕೆ ಮಾಡಿಕೊಂಡು ತಯಾರು ಮಾಡಲಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರ ಹೆಸರಿನಲ್ಲಿ18 ನುರಿತ ಕುಶಲ ಕರ್ಮಿಗಳು 23 ದಿನಗಳ ಕಾಲ ಕೆಲಸ ಮಾಡಿ ಈ ಅಗರಬತ್ತಿ ತಯಾರು ಮಾಡಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೂರ್ತಿಯನ್ನು ಕೆತ್ತನೆ ಮಾಡಿರುವುದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್. ಈ ಮೂರ್ತಿಯ ಶಿಲೆಯು ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿಯ ಪವಿತ್ರ ಸ್ಥಳದಲ್ಲಿ ಸಿಕ್ಕಿತ್ತು. ಇಲ್ಲಿ ಸಹ ಸೋಮವಾರ ವಿಶೇಷ ಪೂಜೆ ನಡೆಯಿತು.












Click it and Unblock the Notifications