'ನಮ್ಮ ಹಣೆ ಬರಹ ಸರಿಯಿಲ್ಲ..ವಿದ್ಯಾವಂತರಿಂದಲೇ ಮೌಢ್ಯ ಆಚರಣೆ'
ಮೈಸೂರು, ನವೆಂಬರ್ 18 : ಪ್ರಸ್ತುತ ಕಾಲದಲ್ಲಿ ವಿದ್ಯಾವಂತರೇ ಹಣೆ ಬರಹ ಸರಿಯಿಲ್ಲ ಎನ್ನುವ ಮೌಢ್ಯ ಅನುಸರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ವಿಷಾದ ವ್ಯಕ್ತಪಡಿಸಿದರು. ಮೈಸೂರು ನಗರದ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮದ್ದೂರು ದೊರೆಸ್ವಾಮಿ ರಚಿಸಿರುವ ಹಂಬಲದ ಹಣತೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಆಡಳಿತ ನಡೆಸುವವರ ನೀಚತನದಿಂದ ನಮ್ಮ ಜನ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆಳುವವರಿಂದ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯನ್ನು ಎತ್ತಬೇಕಾದ ಜನರು ಅಯ್ಯೋ ನಮ್ಮ ಹಣೆ ಬರಹವೇ ಸರಿಯಿಲ್ಲ ಎಂದು ಗೋಳಾಡುತ್ತಾರೆ. ಓದು-ಬರಹ ಗೊತ್ತಿಲ್ಲದ ಅನಕ್ಷರಸ್ಥರಿರಲಿ, ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ, ಕಲಿತಿರುವವರೇ ಮೌಢ್ಯವನ್ನು ಬಲವಾಗಿ ನಂಬುತ್ತಿದ್ದಾರೆ ಎಂದರು.

ದೇಶದ ಬಹುತೇಕ ರಾಜಕಾರಣಿಗಳು ಮಾಡಿರುವ ಅನಾಚಾರ-ಅಪರಾಧಗಳಿಂದ ಅವರನ್ನು ರಕ್ಷಣೆ ಮಾಡಲು ಆಯಾ ಜಾತಿಗಳ ಮಠಾಧೀಶರು ಮುಂದೆ ಬರುತ್ತಾರೆ. ಇದು ಅತ್ಯಂತ ನೋವಿನ ಸಂಗತಿ. ಮಂಟೇಸ್ವಾಮಿ ಮತ್ತು ಮಾದಪ್ಪ ಕಾವೇರಿ ಕಣಿವೆಯ ದಲಿತ ಸಮುದಾಯಕ್ಕೆ ಸೇರಿದವರು. ಇವರನ್ನು ಉತ್ತರದಿಂದ ಬಂದವರು ಎಂದು ಎಲ್ಲರೂ ಹೇಳುತ್ತಾರೆ. ಮಂಟೇಸ್ವಾಮಿ, ಮಾದಪ್ಪ ಉತ್ತರದಿಂದ ಬಂದವರೋ ಅಥವಾ ನಮ್ಮ ನಾಡಿನಲ್ಲಿಯೇ ಜನಿಸಿದ ಚೇತನಗಳೋ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜಾತಿಯ ಕಾರಣಕ್ಕಾಗಿ ನಮ್ಮನ್ನೂ ಶಾಲೆಗೆ ಸೇರಿಸುತ್ತಿರಲಿಲ್ಲ ಎಂದು ಅಳುತ್ತಾರೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಂತಹ ಸಾಂವಿಧಾನಿಕ ಮಹತ್ವದ ಹುದ್ದೆಯಲ್ಲಿದ್ದೂ ಜಾತಿ ವ್ಯವಸ್ಥೆಯ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸದೇ ಕಣ್ಣೀರು ಸುರಿಸುವುದು ತರವಲ್ಲ. ದಲಿತರ ಕೇರಿಗೆ ಹೋಗಿ ಪವಿತ್ರನಾಗಿ ಬಂದೆ ಎಂದು ಹೇಳಿದ ಹನ್ನೆರಡನೇ ಶತಮಾನದ ಬಸವಣ್ಣನವರನ್ನು ಹೆಚ್ಚು ಕಾಲ ಬದುಕಲು ಬಿಡಲಿಲ್ಲ. ಪ್ರಸ್ತುತ ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಚಿಂತಕ ನಾ.ದಿವಾಕರ ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕ ಮದ್ದೂರು ದೊರೆಸ್ವಾಮಿ, ವಾಣಿಜ್ಯ ತೆರಿಗೆಗಳ ಇಲಾಖೆಯ ಸಹಾಯಕ ಆಯುಕ್ತ ಎಸ್.ನಾಗರಾಜು, ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ, ದೇಸಿರಂಗ ಸಾಂಸ್ಕೃತಿಕ ಟ್ರಸ್‌ಟ್ ಅಧ್ಯಕ್ಷ ಕೃಷ್ಣ ಜನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications