ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ; ಪ್ರಮೋದಾ ದೇವಿ ಒಡೆಯರ್
ಮೈಸೂರು, ಏಪ್ರಿಲ್ 06; ಚಾಮುಂಡಿ ಬೆಟ್ಟಕ್ಕೆ ರೋಪ್ ಬೇಡ ಎಂದು ಪರಿಸರಾಸಕ್ತರು ವಾದಿಸುತ್ತಿರುವ ಬೆನ್ನಲೇ ಇದೀಗ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೂಡ ಧ್ವನಿಗೂಡಿಸಿದ್ದಾರೆ.
ಬುಧವಾರ ಅರಮನೆಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, "ಈ ಹಿಂದೆ ಬೆರಳೆಣಿಕೆಯಷ್ಟಿದ್ದ ಮನೆ ಇಂದು ಇಡೀ ಗ್ರಾಮವಾಗಿದೆ. ಚಾಮುಂಡಿ ಬೆಟ್ಟ ಒಂದು ಧಾರ್ಮಿಕ ಕ್ಷೇತ್ರವಾಗಿ ಉಳಿಯಬೇಕು" ಎಂದರು.
"ನಗರದಿಂದ ಬೆಟ್ಟಕ್ಕೆ ಹೋಗಲು ಕೇವಲ 20 ನಿಮಿಷ ಸಾಕು. ಹಾಗಾಗಿ ಪರಿಸರ ನಾಶ ಮಾಡಿ ರೋಪ್ ವೇ ಮಾಡುವ ಅಗತ್ಯವಿಲ್ಲ. ಅದನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಮಾಡಿದರೆ ಪರಿಸರ ನಾಶವಾಗುತ್ತದೆ" ಎಂದು ಹೇಳಿದರು.

"ಈಗಾಗಲೇ ಚಾಮುಂಡಿ ಬೆಟ್ಟದ ಪರಿಸರಕ್ಕೆ ಹಾನಿಯಾಗಿದೆ. ಇರುವುದನ್ನು ಉಳಿಸಿಕೊಳ್ಳಬೇಕಿದೆ. ಬೆಟ್ಟದ ಮೇಲೆಯೇ ನಗರ ಪ್ರದೇಶ ನಿರ್ಮಾಣವಾಗುತ್ತಿದೆ. ಚಾಮುಂಡಿ ಬೆಟ್ಟದ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಅಲ್ಲಿ ವಾಣಿಜ್ಯ ಮಳಿಗೆಗಳ ಅವಶ್ಯಕತೆಯೂ ಇಲ್ಲ. ಮೂಲಭೂತ ಸೌಕರ್ಯಗಳನ್ನು ನೀಡಿದರೆ ಸಾಕು" ಎಂದು ಪಮೋದಾ ದೇವಿ ಒಡೆಯರ್ ತಿಳಿಸಿದರು.
"ಬೆಟ್ಟದ ಮೇಲೆ 120 ಅಡಿ ಎತ್ತರದಲ್ಲಿರೋ ರಾಜೇಂದ್ರ ವಿಲಾಸ ಅರಮನೆ ಬಹಳ ದಿನಗಳಿಂದ ಪ್ರವಾಸಿಗರಿಗೆ ಮುಚ್ಚಿತ್ತು. ಇದೀಗ ರಾಜೇಂದ್ರ ವಿಲಾಸ ಪುನಶ್ಚೇತನ ಕಾಮಗಾರಿ ಆರಂಭ ಮಾಡಲಾಗಿದೆ. ತಜ್ಞರ ಅಭಿಪ್ರಾಯ ಪಡೆದು ನವೀಕರಣ ಮಾಡಲಾಗುತ್ತಿದೆ. ಅರಮನೆಯ ಪುರಾತನ ಪಾರಂಪರಿಕ ಶೈಲಿಯಲ್ಲೇ ನವೀಕರಣ ಕಾರ್ಯ ನಡೆಯುತ್ತಿದೆ" ಎಂದರು.
"ಗೋಪುರದ ನವೀಕರಣ ಮಾಡುವುದು ಬಹಳ ಸವಾಲಾಗಿತ್ತು. ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿದೆ. ಮತ್ತೆ ಹೋಟೆಲ್ ಆಗಿ ಮುಂದುವರೆಸುವ ಉದ್ದೇಶವಿದೆ. 1975 ರಿಂದ ರಾಜೇಂದ್ರ ವಿಲಾಸ ಅರಮನೆ ಹೋಟೆಲ್ ಆಗಿ ನಡೆಯುತ್ತಿತ್ತು. ನಂತರ 1995 ರಲ್ಲಿ ರಾಜೇಂದ್ರ ವಿಲಾಸ ಅರಮನೆ ಮುಚ್ಚಲ್ಪಟ್ಟಿತ್ತು" ಎಂದು ಹೇಳಿದರು.
2022-23ರ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಚಿಕ್ಕಬಳ್ಳಾಪುರದ ನಂದಿ ಗಿರಿಧಾಮಕ್ಕೆ ಸಹ ರೋಪ್ ವೇ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಮೈಸೂರು ಕನ್ನಡ ವೇದಿಕೆ, ಪರಿಸರ ಪ್ರೇಮಿಗಳು ರೋಪ್ ವೇ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಚಾಮುಂಡಿ ಬೆಟ್ಟಕ್ಕೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾಪವಿತ್ತು. ಆದರೆ ವಿರೋಧ ವ್ಯಕ್ತವಾದ ಕಾರಣ ಯೋಜನೆ ಕೈ ಬಿಡಲಾಗಿತ್ತು.












Click it and Unblock the Notifications