ನನಗೆ ರಾಜಕೀಯ ಗೊತ್ತು, ಆದರೆ ರಾಜಕಾರಣ ಬರಲ್ಲ; ಪ್ರಮೋದಾದೇವಿ
ಮೈಸೂರು, ಜೂನ್ 28: ಮೈಸೂರಿನ ದೊಡ್ಡಕೆರೆ ಸಮೀಪದ ಜಾಗದ ಖಾತೆ ಕುರಿತಾದ ಆಸ್ತಿ ವ್ಯಾಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡಕೆರೆ ಪಕ್ಕದ ಜಾಗದ ಖಾತೆ ಮಾಡಿಸಲು ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೋರ್ಟ್ ಆದೇಶ ನಮ್ಮ ಪರವಾಗಿದ್ದರೂ ಅದನ್ನು ಸರ್ಕಾರ ಉಲ್ಲಂಘನೆ ಮಾಡುತ್ತಿದೆ. ಹಳಬರು ಒಂದು ರೀತಿ ತೊಂದರೆ ಕೊಟ್ಟರೆ, ಹೊಸಬರಿಂದ ಮತ್ತೊಂದು ರೀತಿ ತೊಂದರೆ ಆಗುತ್ತಿದೆ. ನನಗೆ ರಾಜಕೀಯ ಗೊತ್ತು. ಆದರೆ ರಾಜಕಾರಣ ಮಾಡಲು ಬರಲ್ಲ. ಅದಕ್ಕಾಗಿ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದರು.
ಈ ಹಿಂದೆ ಶ್ರೀಕಂಠದತ್ತ ಒಡೆಯರ್ ಚುನಾವಣೆ ಎದುರಿಸಿದಾಗ ನಾನು ಕೂಡ ಜನರ ಬಳಿ ಹೋಗಿದ್ದೇನೆ. ಮುಂದಿನ ದಿನಗಳಲ್ಲಿ ಅವರ ಇಚ್ಛೆಯಂತೆ ಗ್ರಾಮ ದತ್ತು ಪಡೆದು ಅಭಿವೃದ್ಧಿ ಮಾಡುವತ್ತ ಗಮನ ಹರಿಸುತ್ತೇವೆ. ಅರಮನೆ ಕಡೆಯಿಂದ ಕೈಲಾದಷ್ಟು ಸಮಾಜ ಕಾರ್ಯಗಳನ್ನು ರೂಪಿಸುತ್ತೇವೆ. ರಾಜಕೀಯೇತರವಾಗಿಯೂ ಜನರ ಸೇವೆ ಮಾಡಬಹುದು ಎಂದರು.

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯ ಪ್ರವೇಶ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅದು ಅವರ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ನಾನು ನನ್ನ ಅನಿಸಿಕೆಯನ್ನು ಮಾತ್ರ ಹೇಳಬಲ್ಲೆ. ನನಗೆ ರಾಜಕೀಯಕ್ಕೆ ಬರಲು ಇಷ್ಟವಿಲ್ಲ. ರಾಜಕೀಯ ಪ್ರವೇಶ ಕುರಿತು ಮುಂದಿನ ದಿನಗಳಲ್ಲಿ ಯದುವೀರ್ ನನ್ನ ಬಳಿ ವಿಷಯ ಪ್ರಸ್ತಾಪಿದರೆ ನಾನು ಸಲಹೆ ನೀಡುತ್ತೇನೆ ಎಂದರು.
ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವದ ಕುರಿತು ಮಾತನಾಡಿ, ಈ ಕಾರ್ಯಕ್ರಮ ಮೈಸೂರು ಅರಮನೆಯಲ್ಲಿ ಜುಲೈ 18ರಂದು ಹಾಗೂ ಜುಲೈ 2 ರಂದು ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಸೇರಿದಂತೆ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ದೆಹಲಿ, ಮುಂಬೈ ಸೇರಿದಂತೆ ಹಲವು ರಾಜ್ಯದ ರಾಜವಂಶಸ್ಥರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾರಂಭದಲ್ಲಿ ಒಡೆಯರ್ ಬಗ್ಗೆ ಚರ್ಚಾಗೋಷ್ಠಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.












Click it and Unblock the Notifications