ಟಾಯ್ಲೆಟ್ ಗೆಂದು ಕರೆದುಕೊಂಡು ಹೋಗಿ ದುಡ್ಡು ದೋಚುತ್ತಿದ್ದವರ ಬಂಧನ
ಮೈಸೂರು, ಡಿಸೆಂಬರ್ 14: ಅಮಾಯಕರನ್ನು ಸುಲಿಗೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಮೂವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಅವರಿಂದ 1.80 ಲಕ್ಷ ರೂಪಾಯಿ ಮೌಲ್ಯದ ಮೂರು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಮೈಸೂರಿನ ವಿಜಯನಗರ ನಿವಾಸಿ ಕಾರ್ತಿಕ್ (23), ಪಡುವಾರಹಳ್ಳಿ ನಿವಾಸಿ ಆನಂದ್ (22), ಬೆಳವಾಡಿಯ ಅಮೃತೇಶ್ವರನಗರದ ನಿವಾಸಿ ಶಿವಕುಮಾರ್ (19) ಎಂದು ಗುರುತಿಸಲಾಗಿದೆ.
ಮಂಜುನಾಥ್ ಎಂಬುವರು ಡಿಸೆಂಬರ್ 12ರಂದು ಬೆಂಗಳೂರಿನಿಂದ ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಂದು ಹೊಳೆನರಸೀಪುರಕ್ಕೆ ಹೋಗುವ ರೈಲು ತಡವಾಗುತ್ತಿದ್ದರಿಂದ ಊಟ ಮಾಡುವ ಸಲುವಾಗಿ ದಾಸಪ್ಪ ಸರ್ಕಲ್‌ಗೆ ಬಂದರು. ಆಗ ಅವರನ್ನು ತಾವೂ ಹೊಳೆನರಸೀಪುರದವರು ಎಂದು ಪರಿಚಯ ಮಾಡಿಕೊಂಡ ಆರೋಪಿಗಳು, ಮೂತ್ರ ವಿಸರ್ಜನೆ ಮಾಡಿ ಬರುವ ಎಂದು ಹೇಳಿ ದಾಸಪ್ಪ ಸರ್ಕಲ್‌ನ ರೈಲ್ವೆ ಬ್ರಿಡ್ಜ್ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

ಅನಂತರ ಮಂಜುನಾಥ್ ಅವರ ಕುತ್ತಿಗೆ ಅದುಮಿ ಹಿಡಿದು ಮುಖದ ಮೇಲೆ ಹೊಡೆದಿದ್ದಾರೆ. ಚಾಕು ತೋರಿಸಿ ಹೆದರಿಸಿ, ಜೇಬಿನಲ್ಲಿದ್ದ ರೂ.2400 ರೂಪಾಯಿ ನಗದು ಮತ್ತು ಕತ್ತಿನಲ್ಲಿದ್ದ ಒಂದು ಸರವನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ದೇವರಾಜ ಠಾಣೆ ಪೊಲೀಸರು ಕೃತ್ಯ ನಡೆದಿರುವ ಸ್ಥಳದ ಅಕ್ಕಪಕ್ಕದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಇಬ್ಬರನ್ನು ಸೆರೆಹಿಡಿದಿದ್ದರು. ಈ ಆರೋಪಿಗಳು ನಜರ್ ಬಾದ್ ಠಾಣೆ, ನರಸಿಂಹರಾಜ ಠಾಣೆ ಮತ್ತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನೂ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.












Click it and Unblock the Notifications