ಜಿಟಿಡಿ ಗೇಮ್ ಪ್ಲಾನ್ ಬದಲು; ಮೈಮುಲ್ ಅಧ್ಯಕ್ಷರಾಗಿ ಪ್ರಸನ್ನ ಆಯ್ಕೆ
ಮೈಸೂರು, ಮಾರ್ಚ್ 30; ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಹಾಗೂ ಮೈಮುಲ್ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಪಕ್ಷದ ವರಿಷ್ಠರಿಗೆ ಟಾಂಗ್ ನೀಡಿದ್ದರು. ಮೈಮುಲ್ ಚುನಾವಣೆಯಲ್ಲಿಯೂ ಅವರು ಗೇಮ್ ಪ್ಲಾನ್ ಬದಲಿಸಿದ್ದಾರೆ.
ಮಂಗಳವಾರ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ. ಟಿ. ದೇವೇಗೌಡರು ತಮ್ಮ ತಂತ್ರದ ಮೂಲಕ ಜೆಡಿಎಸ್ ವರಿಷ್ಠರಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ಪಿ. ಎಂ. ಪ್ರಸನ್ನ ಮೈಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜೆಡಿಎಸ್ ಪಕ್ಷದ ರಾಜಕೀಯ ಚಟುವಟಿಕೆಗಳಿಂದ ಬಹುತೇಕ ದೂರವಿರುವ ಜಿ. ಟಿ. ದೇವೇಗೌಡರು ಜಿಲ್ಲೆಯಲ್ಲಿ ತಮ್ಮ ಎದುರಾಳಿಗೆ ಮೌನವಾಗಿಯೇ ಟಕ್ಕರ್ ಕೊಡುತ್ತಿದ್ದಾರೆ. ಇದೇ ರೀತಿ ಮೈಮುಲ್ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲೂ ಸಹ ಗೇಮ್ ಪ್ಲಾನ್ ಬದಲಾವಣೆ ಮಾಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕೆ. ಈರೇಗೌಡ ಹಾಗೂ ಕೆ. ಎಸ್. ಕುಮಾರ್ ಅವರನ್ನು ಅಭ್ಯರ್ಥಿ ಮಾಡಲು ಒಲವು ತೋರಿದ್ದ ಗೌಡರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಶಾಸಕ ಸಾ. ರಾ. ಮಹೇಶ್ ಪ್ರಾಬಲ್ಯ ಕುಗ್ಗಿಸಲು ಪಿರಿಯಾಪಟ್ಟಣ ಶಾಸಕ ಮಹದೇವ್ ಮಗನಿಗೆ ಮಣೆ ಹಾಕಿದ್ದಾರೆ.
ಈ ಮೂಲಕ ಸಾ. ರಾ. ಮಹೇಶ್ ಜತೆ ಇದ್ದ ಶಾಸಕ ಮಹದೇವ್ ಬಹುತೇಕ ಜಿ. ಟಿ. ದೇವೇಗೌಡ ಅವರ ಪಾಳಯಕ್ಕೆ ಜಿಗಿದಂತಾಗಿದೆ. ಜಿ. ಟಿ. ದೇವೇಗೌಡ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸಭೆಯಲ್ಲಿ ಪ್ರಸನ್ನ ಅವರನ್ನು ಸರ್ವಾನುಮತದಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಿ, ನಾಮಪತ್ರ ಸಲ್ಲಿಸಲು ಸೂಚನೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಕೆ. ಮಹದೇವು ಅವರ ಪುತ್ರ ಪ್ರಸನ್ನ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಅವರನ್ನು ಹೊರತುಪಡಿಸಿ ಬೇರೆ ಯಾರು ಸಹ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ.
ಕೇವಲ ಪ್ರಸನ್ನ ಒಬ್ಬರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಮೈಮುಲ್ ನೂತನ ಅಧ್ಯಕ್ಷರಾಗಿ ಪ್ರಸನ್ನ ಅವರು ಅವಿರೋಧ ಆಯ್ಕೆ ಆದರು. ಇದರೊಂದಿಗೆ ಜಿಟಿಡಿ ತಮ್ಮ ಎದುರಾಳಿಗಳಿಗೆ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಏನೆಂದು ಮನದಟ್ಟು ಮಾಡಿಕೊಟ್ಟಿದ್ದಾರೆ.












Click it and Unblock the Notifications