ಮನೆಗೆ ಬಂದರೆ ಊಟ ಹಾಕ್ತೀಯೇನಮ್ಮ: ಮಹಿಳೆಗೆ ಮೋದಿ ಪ್ರಶ್ನೆ
ಮೈಸೂರು, ಜೂನ್ 21: ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ಕರ್ನಾಟಕ ಪ್ರವಾಸ ಮತ್ತು ಯೋಗ ದಿನಾಚರಣೆ ಭರ್ಜರಿ ಸದ್ದನ್ನು ಮಾಡುತ್ತಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಮೋದಿ ನಡೆಸಿದ ಸಂವಾದಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಮಹಿಳೆಯೊಬ್ಬರ ಜೊತೆ ಮೋದಿ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಮನೆಗೆ ಬಂದರೆ ಊಟ ಕೊಡುತ್ತೀಯನಮ್ಮ? ಎಂದು ಪ್ರಧಾನಿ ಕೇಳಿದ್ದಾರೆ.
"ಸರ್ ನಾವು ಯಶೋಧ ಸುರೇಶ್ ಅಂತ, ಮಂಡ್ಯ ಜಿಲ್ಲೆ ಕೆ. ಆರ್. ಪೇಟೆ ತಾಲೂಕು, ಚಿಕ್ಕೇರಿ ಹೋಬಳಿಯಿಂದ ಬಂದಿದ್ದು"ಎಂದು ಮಹಿಳೆ, ಪ್ರಧಾನಿಗೆ ತನ್ನನ್ನು ಪರಿಚಯಿಸಿಕೊಂಡಿದ್ದಾರೆ. ಮುಂದುವರಿಯುತ್ತಾ, "2019-20ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿನಲ್ಲಿ ಮನೆಯನ್ನು ತೆಗೆದುಕೊಂಡಿದ್ದೆವು"ಎಂದು ಹೇಳಿದ್ದಾರೆ.

"ಈ ಯೋಜನೆಯಿಂದ ನಮಗೆ ತುಂಬಾ ಉಪಯೋಗವಾಗಿದೆ, ಇದಕ್ಕೂ ಮೊದಲು ಹಳೆಯ ಮನೆಯಲ್ಲಿ ಇದ್ದೆವು, ಅದು ಬಿದ್ದು ಹೋಗುವ ರೀತಿಯಲ್ಲಿತ್ತು"ಎಂದು ಮಹಿಳೆ ಪ್ರಧಾನಿಗೆ ವಿವರಿಸುತ್ತಿದ್ದರು. ಆ ವೇಳೆ ಪ್ರಧಾನಿ, "ಮನೆ ಉತ್ತಮವಾಗಿ ಕಟ್ಟಲಾಗಿದೆಯಾ?, ವಿದ್ಯುತ್ ಮತ್ತು ನೀರಿನ ಸಂಪರ್ಕವಿದೆಯಾ?, ಶೌಚಾಲಯ ಕೂಡಾ ನಿರ್ಮಾಣವಾಗಿದೆಯಾ?"ಎಂದು ಪ್ರಶ್ನಿಸಿದ್ದಾರೆ.
"ಎಲ್ಲವೂ ಆಗಿದೆ ಸರ್, ಮನೆ ಕಟ್ಟಲು 1.2ಲಕ್ಷ, ಕೂಲಿ ಕಾರ್ಮಿಕರ ನಿಧಿಯಿಂದ 25 ಸಾವಿರ, ಶೌಚಾಲಯ ಕಟ್ಟಲು 12 ಸಾವಿರ ಬಂದಿದೆ"ಎಂದು ಮಹಿಳೆ ವಿವರಿಸಿದ್ದಾರೆ. ನೀವು ಎಷ್ಟು ಓದಿದ್ದೀರಿ ಎಂದು ಮೋದಿ ಪ್ರಶ್ನಿಸಿದಾಗ, ನಾಲ್ಕನೇ ಕ್ಲಾಸ್ ಎಂದಿದ್ದಾರೆ. ನಾಲ್ಕನೇ ಕ್ಲಾಸ್ ಓದಿ ನಾಯಕಿಯಾಗಿದ್ದೀರಾ, ಶಹಬ್ಬಾಸ್ ಎಂದು ಮೋದಿ ಶ್ಲಾಘಿಸಿದ್ದಾರೆ.
"ಮನೆ ನಿರ್ಮಾಣವಾದ ನಂತರ ಅತಿಥಿಗಳು ತುಂಬಾ ಬರುತ್ತಿದ್ದಾರಾ? ಅವರಿಗೆಲ್ಲಾ ಊಟ ತಯಾರಿಸಬೇಕಲ್ಲವೇ, ನಾನು ಮನೆಗೆ ಬಂದರೆ ಊಟ ಹಾಕುತ್ತೀರಾ"ಎಂದು ಮೋದಿ ಪ್ರಶ್ನಿಸಿದಾಗ ತಬ್ಬಿಬ್ಬಾದ ಮಹಿಳೆ, "ಬನ್ನಿ ಸರ್..ನಮ್ಮ ಸೌಭಾಗ್ಯ, ತುಂಬಾ ಸಂತೋಷವಾಗುತ್ತದೆ"ಎಂದು ಹೇಳಿದ್ದಾರೆ. ಈ ವಿಡಿಯೋ ತುಣುಕು ಸಾಕಷ್ಟು ಪ್ರಚಾರವನ್ನು ಪಡೆಯುತ್ತಿದೆ.











Click it and Unblock the Notifications