ಸಾಂಸ್ಕೃತಿಕ ನಗರಿಯಲ್ಲಿ 'ಮೈಸೂರು ಪಾಕ್' ಸವಿಯಲಿರುವ ಮೋದಿ: ಇಲ್ಲಿದೆ ಮೆನು ಡಿಟೈಲ್ಸ್
ಮೈಸೂರು, ಜೂನ್ 20: ಅಂತಾರಾಷ್ಟ್ರೀಯ ಯೋಗ ದಿನಾಚಾರಣಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಸೋಮವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೋಟೆಲ್ ರ‍್ಯಾಡಿಸನ್ ಬ್ಲೂನಲ್ಲಿ ತಂಗಲಿದ್ದಾರೆ. ಇನ್ನೂ 3 ವರ್ಷಗಳ ನಂತರ ಆಗಮಿಸಿರುವ ನರೇಂದ್ರ ಮೋದಿಗಾಗಿ ಮೈಸೂರು ಶೈಲಿಯ ಮೆನು ರೆಡಿಯಾಗಿದೆ.
ನರೇಂದ್ರ ಮೋದಿಗಾಗಿ ಶುದ್ಧ ಸಸ್ಯಹಾರಿ ಊಟ ತಯಾರಿಸಲಾಗಿದೆ. ಮಿತವಾದ ಸಕ್ಕರೆ ಹಾಗೂ ಕಡಿಮೆ ಮಸಾಲೆ ಅಂಶವಿರುವ ಆಹಾರ ತಯಾರು ಮಾಡಲಾಗಿದೆ. ಮೈಸೂರು ಶೈಲಿಯ ವೆಜಿಟೇಬಲ್ ಸೂಪ್, ಮಸಾಲ ಮಜ್ಜಿಗೆ, ರೋಟಿ, ಜೀರಾ ರೈಸ್, ದಾಲ್ ಹಾಗೂ ಮಿಕ್ಸ್ ಫ್ರೂಟ್ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೆ ನರೇಂದ್ರ ಮೋದಿ ಅವರು ಇಷ್ಟ ಪಟ್ಟರೆ ಪರ್ಯಾಯವಾಗಿ ಮತ್ತೊಂದು ಮೆನು ರೆಡಿ ಮಾಡಲಾಗಿದೆ. ಅದರಲ್ಲಿ ಗುಜರಾತಿ ಕರಿ, ರೋಟಿ, ಕಿಚಡಿ, ಎರಡು ಬಗೆಯ ಸಬ್ಜಿ, ದಾಲ್, ರೈಸ್ ಹಾಗೂ ಮಿಕ್ಸ್ ಫ್ರೂಟ್ ಕೂಡ ತಯಾರಿಸಲಾಗಿದೆ.

ಮೈಸೂರು ಅರಮನೆಯಲ್ಲಿ ನರೇಂದ್ರ ಮೋದಿ ಅವರು ಮಂಗಳವಾರ ವಿಶ್ವಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ನಂತರ ಮೈಸೂರು ರಾಜವಂಶಸ್ಥರ ಜೊತೆ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ.
ಅರಮನೆಯಲ್ಲಿ ಇಡ್ಲಿ- ಸಾಂಬಾರ್, ಬ್ರೆಡ್ ಬಟರ್, ಮಿಕ್ಸ್ ಫ್ರಂಟ್, ಅವಲಕ್ಕಿ ಹಾಗೂ ಉಪ್ಪಿಟ್ಟಿನ ಸವಿಯನ್ನು ಉಣಬಡಿಸಲಾಗುವುದು. ಇದರ ಜೊತೆಗೆ ಸಾಂಸ್ಕೃತಿಕ ನಗರಿ ಮೈಸೂರು ಬ್ರ್ಯಾಂಡ್ 'ಮೈಸೂರು ಪಾಕ್' ರುಚಿಯನ್ನು ಕೂಡ ನರೇಂದ್ರ ಮೋದಿ ಅವರಿಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಮೈಸೂರು ಅರಸರ ಕಾಲದಲ್ಲಿ ರಾಜರ ಬಾಣಸಿಗ ಕಾಕಾಸುರ ಮಾದಪ್ಪ ಎಂಬುವವರಿಂದ ಈ ಸಿಹಿ ತಿನಿಸುವ ತಯಾರಾಗುತ್ತಿತ್ತು. ಈ ಸಿಹಿ ತಿಂಡಿಗೆ ಕೃಷ್ಣರಾಜ ಒಡೆಯರು ಮೈಸೂರು ಪಾಕ್ ಎಂದು ಹೆಸರು ನೀಡಿದ್ದರು. ಇಂದಿಗೂ ಕಾಕಾಸುರ ಮಾದಪ್ಪ ಕುಟುಂಬ ಮೈಸೂರು ಪಾಕ್ ತಯಾರಿಸುತ್ತಿದ್ದು, ಪ್ರಧಾನಿ ಮೋದಿಗೆ ನೀಡುವುದಕ್ಕೆ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಮೈಸೂರು ಪಾಕ್ ತಯಾರು ಮಾಡುತ್ತಿದೆ ಎಂದು ತಿಳಿದುಬಂದಿದೆ.












Click it and Unblock the Notifications