Narendra Modi Road Show: ಮೈಸೂರಿನಲ್ಲಿ ಮೋದಿಯತ್ತ ಎಸೆದ ಮೊಬೈಲ್ ವ್ಯಕ್ತಿಗೆ ವಾಪಸ್
ಮೈಸೂರು, ಮೇ, 01: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ (ಏಪ್ರಿಲ್ 31) ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಮೋದಿಯತ್ತ ಹೂವಿನ ದಳಗಳೊಂದಿಗೆ ಎಸೆದಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆ ಮೊಬೈಲ್ ಫೋನ್ ಅನ್ನು ಆರ್‌ಎಸ್‌ಎಸ್ ಕಾರ್ಯಕರ್ತನಾದ ನಂಜುಡೇ ರಾಜ್ ಅರಸ್‌ಗೆ ವಾಪಸ್ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ನಂಜುಂಡೇ ರಾಜೇ ಅರಸ್ ಮಾತನಾಡಿ, ಮೋದಿ ರೋಡ್ ಶೋ ವೇಳೆ ಫೋಟೋ ತೆಗೆಯುತ್ತಿದ್ದಾಗ ಹಿಂದಿನಿಂದ ಹೂ ಎಸೆದವರ ಕೈ ತಾಕಿ ಮೊಬೈಲ್ ಪ್ರಚಾರದ ವಾಹನದ ಮೇಲೆ ಬಿದ್ದಿತು. ಆಗ ನಾನು ಕೂಗಿಕೊಂಡೆ. ಸ್ಥಳದಲ್ಲಿದ್ದ ಪೊಲೀಸರು ಮೊಬೈಲ್ ಅನ್ನು ವಾಪಾಸು ನೀಡಿದರು. ಬಳಿಕ ಪೊಲೀಸರು ನನ್ನನ್ನು ಕರೆಯಿಸಿ ಅಗತ್ಯ ಮಾಹಿತಿಯನ್ನು ಪಡೆದು ಕಳುಹಿಸಿದರು ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 4 ಕಿಲೋ ಮೀಟರ್‌ವರೆಗೆ ರೋಡ್ ಶೋ ನಡೆಸಿ ಗಮನ ಸೆಳೆದಿದ್ದರು. ರೋಡ್ ಶೋ ನಡೆದ ರಸ್ತೆಯ ಇಕ್ಕೆಲಗಳಗಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಲು ಕಿಕ್ಕಿರಿದು ಆಗಮಿಸಿದ್ದರು.

ಅಷ್ಟೇ ಅಲ್ಲದೆ ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಹಾಗೆಯೆ ದಾರಿಯುದ್ದಕ್ಕೂ ಮೋದಿಗೆ ಹೂ ಮಳೆಯನ್ನೇ ಸುರಿಸಿದರು. ಆದರೆ ಚಿಕ್ಕಗಡಿಯಾರದ ಬಳಿ ಹೂಗಳ ಮಧ್ಯೆ ಕೈತಪ್ಪಿ ಮೊಬೈಲ್‍ವೊಂದು ತೂರಿ ಬಂದ ಘಟನೆ ನಡೆದಿತ್ತು.
ಮೊಬೈಲ್ ಬಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕ ಸೃಷ್ಟಿ ಆಗಿತ್ತು. ಅದನ್ನು ಸ್ವತಃ ಮೋದಿ ಹಾಗೂ ಎಸ್‍ಪಿಜಿಯವರು ಗಮನಿಸಿದ್ದರು. ಅಷ್ಟೇ ಅಲ್ಲದೇ ಮೋದಿ ಅವರು ರೋಡ್ ಶೋ ವೇಳೆಯೇ ಮೊಬೈಲ್ ಅನ್ನು ಹಿಂದಿರುಗಿಸುವಂತೆ ಸನ್ನೆಯನ್ನು ಮಾಡಿದ್ದರು. ಆದರೆ ಮೊಬೈಲ್ ಪ್ರಚಾರದ ವಾಹನದ ಮೇಲೆ ಬಿದ್ದಿದ್ದರಿಂದ ಯಾವುದೇ ಅನಾಹುತಗಳು ಆಗಿರಲಿಲ್ಲ. ಆದರೂ ರೋಡ್ ಶೋ ವೇಳೆ ಪ್ರಧಾನಿ ಅವರಿಗೆ ಭದ್ರತಾ ಲೋಪ ಆಗಿದೆಯಾ ಅನ್ನುವ ಚರ್ಚೆಯೂ ಆಗಿತ್ತು.
ಘಟನೆಗೆ ಸಂಬಂಧಿಸಿ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದು, ಮೊಬೈಲ್ ಫೋನ್ ಎಸೆದವರು ಮಹಿಳಾ ಬಿಜೆಪಿ ಕಾರ್ಯಕರ್ತೆ ಆಗಿದ್ದಾರೆ. ಅವರು ದುರುದ್ದೇಶದಿಂದ ಮೊಬೈಲ್ ಅನ್ನು ಎಸೆದಿಲ್ಲ. ಬದಲಿಗೆ ಹೂ ದಳಗಳನ್ನು ಎಸೆಯುವಾಗ ಆಕಸ್ಮಿಕವಾಗಿ ಬಿದ್ದಿದೆ. ಈ ಹಿನ್ನೆಲೆ ಎಸ್‍ಪಿಜಿಯವರು ಮೊಬೈಲ್ ಅನ್ನು ಮಹಿಳೆಗೆ ಹಿಂದಿರುಗಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications