ಬಹಿಷ್ಕಾರಕ್ಕೆ ನೊಂದ ವ್ಯಕ್ತಿ ಸಾವಿಗೆ ಶರಣು: ಸಿಎಂ ತವರು ಜಿಲ್ಲೆಯಲ್ಲಿ ದಾರುಣ ಘಟನೆ
ಮೈಸೂರು, ಸೆಪ್ಟೆಂಬರ್ 24: ಬಹಿಷ್ಕಾರದ ಶಿಕ್ಷೆಗೆ ಬೇಸತ್ತ ವ್ಯಕ್ತಿ ಸಾವಿಗೆ ಶರಣಾದ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ನಂಜನಗೂಡು ತಾಲೂಕಿನ ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅನಿಷ್ಟ ಪದ್ಧತಿ ಜಾರಿಯಲ್ಲಿರುವುದು ವಿಷಾದನೀಯವಾಗಿದೆ. ಅಂತ್ಯ ಸಂಸ್ಕಾರಕ್ಕೂ ಆಗಮಿಸದ ಸಮುದಾಯದ ಜನ ಅಮಾನೀಯವಾಗಿ ವರ್ತಿಸಿದ್ದಾರೆ. ಮೃತದೇಹವನ್ನು ಜಮೀನಿನ ಮನೆಯಲ್ಲಿ ಇರಿಸಿ ಕೇವಲ ಸಂಬಂಧಿಕರೇ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ.
ಸ್ವಾಮಿ (48) ಬಹಿಷ್ಕಾರಕ್ಕೆ ಮನನೊಂದು ಸಾವಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ವಾಮಿ ಹಾಗೂ ಕುಟುಂಬದ ಮೇಲೆ ಸಮುದಾಯದ ಹಾಗೂ ಗ್ರಾಮದ ಮುಖಂಡರು ಬಹಿಷ್ಕಾರ ಹೇರಿದ್ದರು. ಒಂದು ಲಕ್ಷ ದಂಡ ಕಟ್ಟಿದರೆ ಬಹಿಷ್ಕಾರ ತೆರವುಗೊಳಿಸುವುದಾಗಿ ಷರತ್ತು ವಿಧಿಸಿದ್ದರು. ಹೀಗಾಗಿ ಸ್ವಾಮಿ ಕುಟುಂಬದ ಜೊತೆ ಗ್ರಾಮಸ್ಥರ ಸಂಪರ್ಕ ಕಡಿದು ಹೋಗಿತ್ತು.

ಚೆನ್ನಪಟ್ಟಣ ಗ್ರಾಮದ ಹೊರವಲಯದಲ್ಲಿರುವ ಜಮೀನಿನ ಮನೆಯಲ್ಲಿ ಸ್ವಾಮಿ ಕುಟುಂಬ ವಾಸವಿತ್ತು. ಬಹಿಷ್ಕಾರ ತೆರವುಗೊಳಿಸುವಂತೆ ಸ್ವಾಮಿ ಹಾಗೂ ಕುಟುಂಬ ಇನ್ನಿಲ್ಲದಂತೆ ಮನವಿ ಮಾಡಿದ್ದರು. ಆದರೆ ಬಹಿಷ್ಕಾರ ಹೇರಿದ್ದ ಮುಖಂಡರು ಮಣಿದಿರಲಿಲ್ಲ. ಹೀಗಾಗಿ ಇದರಿಂದ ಮನನೊಂದು ಸ್ವಾಮಿ ಮಧ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ಸಾವಿಗೆ ಶರಣಾಗಿದ್ದಾರೆ.
ಸ್ವಾಮಿ ಸಾವಿಗೆ ಬಹಿಷ್ಕಾರ ಕಾರಣ ಎಂದು ತಾಯಿ ತಿಮ್ಮಮ್ಮ ಆರೋಪಿಸಿದ್ದಾರೆ. ಇದಕ್ಕೆಲ್ಲಾ ಚೆನ್ನಪಟ್ಟಣ ಗ್ರಾಮದ ತಾಯಮ್ಮ, ಶಿವರಾಜು, ತಿಮ್ಮ ಬೋವಿ, ಕಣ್ಣ ಮತ್ತು ನಿಂಗರಾಜ ಕಾರಣ ಎಂದು ಸ್ವಾಮಿ ತಾಯಿ ತಿಮ್ಮಮ್ಮ ನೇರವಾಗಿ ಆರೋಪಿಸಿದ್ದಾರೆ.
ಮಗನ ಸಾವಿನಿಂದ ಕಂಗಲಾಗಿರುವ ಮೃತ ವ್ಯಕ್ತಿ ಸ್ವಾಮಿ ತಾಯಿ ತಿಮ್ಮಮ್ಮ ಮಾತನಾಡಿದ್ದು, ಕಳೆದ ಗ್ರಾಮ ಪಂಚಾಯಿತಿಯ ಚುನಾವಣೆಯಿಂದಲೂ ನನ್ನ ಮಗನ ಮೇಲೆ ಚನ್ನಪಟ್ಟಣ ಗ್ರಾಮದ ಕೆಲವರು ತುಂಬಾ ದ್ವೇಷಿಸುತ್ತಿದ್ದರು. ಸಣ್ಣಪುಟ್ಟ ಗಲಾಟೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಬಹಿಷ್ಕಾರ ಹಾಕಿ ಈಗ ಕುಟುಂಬವನ್ನೇ ಸರ್ವನಾಶ ಮಾಡಿದ್ದಾರೆ. ನನ್ನ ಮಗನ ಸಾವಿಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲಿದೆ ಮುಖ್ಯವಾದ ಮಾಹಿತಿ
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications