ಮೊದಲ ಬಾರಿಗೆ ವಿಮಾನಯಾನ ಜೊತೆಗೆ ರಾಷ್ಟ್ರಪತಿಗಳ ಭೇಟಿ: ಪಿರಿಯಾಪಟ್ಟಣ ಆದಿವಾಸಿಗಳ ಖುಷಿಯ ಕ್ಷಣ!
ಮೈಸೂರು, ಜುಲೈ 04: ಇತ್ತೀಚೆಗೆ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆದಿವಾಸಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಆಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ನೂರಾರು ವರ್ಷಗಳಿಂದ ಬುಡಕಟ್ಟು ಸಮುದಾಯ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವೊಂದು ಸಮಸ್ಯೆಗಳಿಗೆ ಕಾನೂನು ಸಂಘರ್ಷ ಏರ್ಪಟ್ಟಿದೆ. ಪಿರಿಯಾಪಟ್ಟಣದ ನೈಜ ದುರ್ಬಲ ಸಮುದಾಯಗಳಾದ ಜೇನುಕುರುಬ, ಕೊರಗ ಸಮಾಜದ ಕೆಲವರನ್ನು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಆಯ್ಕೆ ಮಾಡಿತ್ತು. ಈ ಸಂಬಂಧ ಆಯಾ ಜಿಲ್ಲೆಗಳ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಪತ್ರ ಕಳುಹಿಸಲಾಗಿತ್ತು.

ಏನಿದು ಯೋಜನೆ?
ಕೇಂದ್ರ ಸರಕಾರ ರಾಷ್ಟ್ರಾದ್ಯಂತ ಇರುವ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು ಎಂದು 75 ಬುಡಕಟ್ಟು ವರ್ಗಗಳನ್ನು ಗುರುತು ಮಾಡಿದ್ದು, ಈ ಸಮುದಾಯಗಳ ಅಭಿವೃದ್ಧಿಗೆ 15 ಸಾವಿರ ಕೋಟಿ ರೂಪಾಯಿಗಳಷ್ಟು ಮೀಸಲಿರಿಸಿದೆ. ಈ ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು ಇತ್ತೀಚೆಗೆ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆಸಲಾಯಿತು. ಈ ಸಮಾರಂಭಕ್ಕೆ ದೇಶದಾದ್ಯಂತ 2,500 ಮಂದಿ ಬುಡಕಟ್ಟು ಮುಖಂಡರು ಭಾಗವಹಿಸಿದ್ದು, ಇದರಲ್ಲಿ ರಾಜ್ಯದಿಂದ 20 ಮಂದಿ ತೆರಳಿದ್ದರು.
ವಿಮಾನ ಏರಿದ ಖುಷಿಯಲ್ಲಿ ಬುಡಕಟ್ಟು ಸಮುದಾಯ
ಬಹಳಷ್ಟು ಬುಡಕಟ್ಟು ಸಮುದಾಯ ವಿಮಾನವನ್ನೇ ನೋಡಿರಲಿಲ್ಲ. ಜೊತೆಗೆ ವಿಮಾನ ಪ್ರಯಾಣವನ್ನೂ ಮಾಡಿರಲಿಲ್ಲ. ಆದರೆ, ರಾಷ್ಟ್ರಪತಿ ಭೇಟಿ ನೆಪದಲ್ಲಿ ಇದೀಗ ಪಿರಿಯಾಪಟ್ಟಣ ಆದಿವಾಸಿಗಳು ವಿಮಾನಯಾನ ಅನುಭವಿಸಿದರು. ಮೊದಲ ಬಾರಿ ಆಕಾಶದಲ್ಲಿ ಪ್ರಯಾಣಿಸಿ ಖುಷಿಪಟ್ಟರು. ದಿಲ್ಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಕ್ಕಾಗಿ ಆದಿವಾಸಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇದು ಅವರ ಜೀವನದ ವಿಶೇಷ ಅನುಭವಗಳ ಸಾಲಿಗೆ ಸೇರಿತು.
ಸಮಸ್ಯೆ ಹಂಚಿಕೊಂಡ ಆದಿವಾಸಿಗಳು
ರಾಜ್ಯದಲ್ಲಿ ಇರುವ ಅನೇಕ ಬುಡಕಟ್ಟು ಸಮುದಾಯಗಳ ಪೈಕಿ ವಿಶೇಷ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು ಎಂದು ಜೇನು ಕುರುಬ ಮತ್ತು ಕೊರಗ ಸಮುದಾಯಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಕೊರಗ ಸಮುದಾಯಗಳು ಕಂಡುಬಂದರೆ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಜೇನುಕುರುಬ ಸಮುದಾಯ ಕಂಡು ಜನರು ಬರುತ್ತದೆ. ಬೆಂಗಳೂರಿನಿಂದ 10ರಂದು ವಿಮಾನದಲ್ಲಿ ದಿಲ್ಲಿಗೆ ಪ್ರಯಾಣ ಬೆಳೆಸಿದ ಬುಡಕಟ್ಟು ಜನಾಂಗದವರು 13ರಂದು ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರೆಲ್ಲರೂ ತಾವು ಏನೆಲ್ಲಾ ಸಮಸ್ಯೆ ಎದುರಿಸುತ್ತಿದ್ದೇವೆ ಎಂಬುದನ್ನು ರಾಷ್ಟ್ರಪತಿಗಳ ಎದುರು ತೋಡಿಕೊಂಡರು.












Click it and Unblock the Notifications