ನಂಜನಗೂಡು ರಥದ ಚಕ್ರ ಸಿಲುಕಿ ಆತಂಕ!
ನಂಜನಗೂಡು, ಏ.11: ದಕ್ಷಿಣ ಕಾಶಿ ನಂಜನಗೂಡಿಯಲ್ಲಿ ಮುಂಜಾನೆ ಪಂಚ ಮಹಾರಥೋತ್ಸವ ರಸ್ತೆಯ ಹಳ್ಳಕ್ಕೆ ಸಿಲುಕಿ ಮಧ್ಯದಲ್ಲೇ ನಿಂತ ಪ್ರಸಂಗ ನಡೆಯಿತು. ಸುಮಾರು ಎರಡುಗಂಟೆಗಳ ಕಾಲ ಭಕ್ತರದಲ್ಲಿ ಆತಂಕ ಹುಟ್ಟಿಸಿತ್ತು. ಆದರೆ, ಕೆಲಕಾಲದ ವಿಳಂಬದ ನಂತರ ಪೂಜಾ ಕಾರ್ಯಗಳು ಎಂದಿನಂತೆ ಸಾಗಿದ್ದು, ಭಕ್ತರು ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 5.20 ರಿಂದ ಆರಂಭವಾದ ಇತಿಹಾಸ ಪ್ರಸಿದ್ಧ ಪಂಚ ರಥೋತ್ಸವ ಅರ್ಧಕ್ಕೆ ನಿಂತಿದ್ದರಿಂದ ಭಕ್ತರಲ್ಲಿ ಆತಂಕ ಎದುರಾಯಿತು. ಬೆಳಿಗ್ಗೆ ಪೂಜಾ ಕೈಂಕರ್ಯದ ನಂತರ ರಥಬೀದಿಯಲ್ಲಿ ಸಾಗಿದ ರಥ ರಸ್ತೆಯ ಹಳ್ಳಕ್ಕೆ ಸಿಲುಕಿ ಎರಡು ಗಂಟೆಗೂ ಹೆಚ್ಚು ಕಾಲ ಕದಲದೆ ನಿಂತಿದ್ದು ಆತಂಕಕ್ಕೆ ಕಾರಣವಾಯಿತು.
ಆದರೆ, ಸುಮಾರು 8.10 ರ ಹೊತ್ತಿಗೆ ಮತ್ತೆ ರಥವನ್ನು ಹಳ್ಳದಿಂದ ಮೇಲಕ್ಕೆತ್ತಿ ಉತ್ಸವ ಜರುಗಿಸಲಾಯಿತು. ಆದರೆ, ಮುಂದೆ ಬಂದು ಮತ್ತೊಂದು ಹಳ್ಳಕ್ಕೆ ಸಿಲುಕಿ ವಿಜಯಾ ಬ್ಯಾಂಕ್ ಬಳಿ ನಿಂತಿತು. ಇದಕ್ಕೂ ಮೊದಲು ದೇವಸ್ಥಾನದ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ರವರು ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಪೂಜಾ ಕೈಂಕರ್ಯ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು.
ನೆರೆದಿದ್ದ ಭಕ್ತ ಮಹಾಸ್ತೋಮ ಹರ ಹರ ಮಹದೇವ, ಹರ ಹರ ಶ್ರೀಕಂಠ ಎಂದು ಘೋಷಣೆಗಳನ್ನು ಕೂಗುತ್ತಿದ್ದಂತೆಯೇ ರಥಗಳು ಚಾಲನೆಗೊಂಡವು. ರಥಗಳು ರಾಜ ಬೀದಿಗಳಲ್ಲಿ ಚಲಿಸಿದವು. ಮೊದಲಿಗೆ ಗಣಪತಿ ರಥ, ಶ್ರೀಕಂಠೇಶ್ವರ ಸ್ವಾಮಿ ರಥ (ಗೌತಮ ರಥ), ಚಂಡಿಕೇಶ್ವರ, ಸುಬ್ರಹ್ಮಣ್ಯ ಕೊನೆಯಲ್ಲಿ ಪಾರ್ವತಮ್ಮ ರಥಗಳು ಉತ್ಸವದಲ್ಲಿ ಜತೆಗೂಡಿದವು.

ಶ್ರೀಕಂಠೇಶ್ವರ ಸ್ವಾಮಿಯವರ ವಿಶೇಷ ಹೂವಿನ ಅಲಂಕಾರದ ರಥವನ್ನು ನೋಡಿದ ಭಕ್ತರು ಭಾವ ಪರವಶರಾಗಿ ಹಣ್ಣು ಜವನವನ್ನು ರಥಕ್ಕೆ ಎಸೆದು ತಮ್ಮ ಹರಕೆ ತೀರಿಸಿಕೊಂಡರು.
ಭಕ್ತರ ಆತಂಕ: ಪಂಚ ಮಹಾ ರಥೋತ್ಸವದ ವೇಳೆ ರಥ ಹಳ್ಳಕ್ಕೆ ಸಿಲುಕಿ ನಿಂತು ಅಪಶಕುನವಾಯಿತು ಎಂದು ಭಕ್ತರು ಆತಂಕ ವ್ಯಕ್ತಪಡಿಸಿದರು. ದೇವಸ್ಥಾನದ ಸುತ್ತಮುತ್ತ ಹಾಗೂ ರಾಜಬೀದಿಗಳನ್ನು ದುರಸ್ತಿಗೊಳಿಸಿ ರಥ ಬರಲು ಅನುಕೂಲ ಕಲ್ಪಿಸದೆ ಇರುವುದೇ ಇಂಥ ಅವಘಡಕ್ಕೆ ಕಾರಣ ಎಂದು ಆರೋಪಿಸಿದರು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಅವಘಡಗಳು ಹೆಚ್ಚಾಗಲಿವೆ ಎಂದು ಆತಂಕದಿಂದ ಅಲ್ಲಿ ನೆರೆದಿದ್ದ ಭಕ್ತರು ಅಳಲು ತೋಡಿಕೊಂಡರು.ಪಟ್ಟಣದಲ್ಲಿ ಅನೇಕ ಸಂಘ-ಸಂಸ್ಥೆಗಳು, ದೇಗುಲದ ವತಿಯಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿದ್ದರು.












Click it and Unblock the Notifications