ಕೆಎಸ್ ಆರ್ ಟಿಸಿ ಬಸ್ ಸೇವೆಗೆ ವಿನಾಯಿತಿ ಸಿಗುತ್ತದಾ? ಇಲ್ಲಿದೆ ಉತ್ತರ...
ಮೈಸೂರು, ಏಪ್ರಿಲ್ 13: ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಸೇವೆ ಸದ್ಯಕ್ಕೆ ಆರಂಭಗೊಳ್ಳುವುದಿಲ್ಲ ಎಂದು ಕರಾರಸಾ ನಿಗಮದ ನಿರ್ದೇಶಕ ಡಾ.ರಾಮನಿವಾಸ ಸೆಪಟ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕು ನಿವಾರಣೆಗೆ ಕ.ರಾ.ರ.ಸಾ.ನಿಗಮ ಮೈಸೂರು ಗ್ರಾಮಾಂತರ ವಿಭಾಗ ಮತ್ತು ಮೈಸೂರು ನಗರ ವಿಭಾಗದ ವತಿಯಿಂದ ಎರಡು ಸಾರಿಗೆ ಸಂಜೀವಿನಿ-ಮೊಬೈಲ್ ಸ್ಯಾನಿಟೈಸರ್ ಬಸ್ ಗಳನ್ನು ಇಂದು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, "ಬಸ್ ಸೇವೆ ಆರಂಭಿಸುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಆಗಿಲ್ಲ. ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ" ಎಂದರು.
"ಕೆಎಸ್ಆರ್ ಟಿಸಿ ಸಿಬ್ಬಂದಿ ಅನುಕೂಲಕ್ಕಾಗಿ ಎರಡು ಬಸ್ ಗಳನ್ನು ಸ್ಯಾನಿಟೈಸರ್ ಬಸ್ ಗಳಾಗಿ ಪರಿವರ್ತಿಸಲಾಗಿದೆ. ನಮ್ಮಲ್ಲಿ ಸಾಕಷ್ಟು ಹಳೆ ಬಸ್ ಗಳಿವೆ. ಜಿಲ್ಲಾಡಳಿತ ಕೋರಿದರೆ ಇನ್ನಷ್ಟು ಬಸ್ ಗಳನ್ನು ಸ್ಯಾನಿಟೈಸರ್ ಗಳಾಗಿ ಮಾಡಿಕೊಡಲಾಗುವುದು" ಎಂದರು.

ರೈಲ್ವೆ ಬೋಗಿಗಳು ಐಸೊಲೇಷನ್ ವಾರ್ಡ್ ಗಳಾದ ಬೆನ್ನಲ್ಲೇ ಹಳೆಯ ಬಸ್ ಗಳನ್ನು ಸ್ಯಾನಿಟೈಸರ್ ಆಗಿ ಪರಿವರ್ತನೆ ಮಾಡಲಾಗಿದೆ. ಕೆಎಸ್ ಆರ್‌ಟಿಸಿ ವತಿಯಿಂದ ಈ ವಿನೂತನ ಪ್ರಯತ್ನ ಮಾಡಲಾಗಿದ್ದು, ಯಶಸ್ವಿಯೂ ಆಗಿದೆ. ಸಾರಿಗೆ ಸಂಜೀವಿನಿ ಹೆಸರಿನಲ್ಲಿ ಸ್ಯಾನಿಟೈಸರ್ ವಿನ್ಯಾಸ ಮಾಡಲಾಗಿದ್ದು, ನಿಗಮದ ಸಿಬ್ಬಂದಿ ಬಳಕೆಗಾಗಿ ಎರಡು ವಾಹನಗಳು ರೆಡಿಯಾಗಿವೆ. ಪ್ರತಿ ವಾಹನದಲ್ಲಿ 200 ಲೀಟರ್ ನೀರು, 12 ಸ್ಪ್ರಿಂಕ್ಲರ್ ಅಳವಡಿಕೆ ಮಾಡಲಾಗಿದೆ. ಪ್ರತಿ ವಾಹನಕ್ಕೆ ಸುಮಾರು 20,000 ರೂ.ವೆಚ್ಚವಾಗಿದೆ. ಈ ಬಸ್ಸುಗಳಲ್ಲಿ ಮುಂದಿನ ಬಾಗಿಲಿನಲ್ಲಿ ಹತ್ತಿ ಹಿಂಭಾಗದಲ್ಲಿ ಇಳಿದರೆ ಸಂಪೂರ್ಣವಾಗಿ ದೇಹಕ್ಕೆ ವೈರಾಣು ನಿರೋಧಕ ದ್ರಾವಣ ಸಿಂಪಡಣೆಯಾಗಲಿದೆ. ಈ ಮೂಲಕ ಕೊರೊನಾ ಸೋಂಕು ನಿವಾರಣೆಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.











Click it and Unblock the Notifications