ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್, ಆಟೋಗಳಿಗೆ ಪ್ರವೇಶವಿಲ್ಲ: ಪ್ರತಾಪ್ ಸಿಂಹ
ಮೈಸೂರು, ಜನವರಿ, 06: ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್ ಮತ್ತು ಆಟೋಗಳಿಗೆ ಅವಕಾಶವಿಲ್ಲ. ಸರ್ವಿಸ್ ರಸ್ತೆಯಲ್ಲಷ್ಟೇ ಹೋಗಬಹುದು ಎಂದು ಸಂಸದ ಪ್ರತಾಪಸಿಂಹ ಮೈಸೂರಿನಲ್ಲಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸ್‌ಪ್ರೆಸ್ ವೇ ಕಾಮಗಾರಿ ಭರದಿಂದ ಸಾಗುತ್ತಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಲಾಗುವುದು. ಫೆಬ್ರವರಿ ಒಳಗೆ ಕಾಮಗಾರಿ ಮುಗಿಸಿ ಮಾರ್ಚ್‌ನಲ್ಲಿ ಉದ್ಘಾಟನೆ ನೆರವೇರಿಸಲಾಗುವುದು. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಘೋಷಿಸಿದರು. ಹಾಗಾಗಿ ಅವರೇ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.

ಬೈಕ್, ಆಟೋಗಳಿಗೆ ಪ್ರವೇಶವಿಲ್ಲ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಇಂಧನ ಹಾಗೂ ಸಮಯ ಎರಡನ್ನೂ ಉಳಿಸುತ್ತದೆ. ಹಾಗಾಗಿ ಎರಡು ಕಡೆ ಟೋಲ್ ಕಟ್ಟಬೇಕಿದೆ. ಅಲ್ಲದೆ, ಮೂರುವರೆ ಗಂಟೆ ಪಯಣ ಒಂದೂವರೆ ಗಂಟೆಗೆ ಇಳಿಯಲಿದೆ. ಬಸ್ಸು, ಕಾರುಗಳು ಎಕ್ಸ್‌ಪ್ರೆಸ್ ವೇನಲ್ಲಿ ಸಾಗಲಿದೆ. ಆದರೆ, ಬೈಕ್ ಮತ್ತು ಆಟೋಗಳಿಗೂ ಅವಕಾಶ ಕೊಟ್ಟರೆ ಅಪಘಾತ ಆಗುವ ಸಾಧ್ಯತೆ ಇದೆ. ಹೀಗಾಗಿ ಬೈಕ್ ಮತ್ತು ಆಟೋಗಳಿಗೆ ಸರ್ವಿಸ್ ರಸ್ತೆಯಲ್ಲಿ ತೆರಳಲು ಅವಕಾಶ ಮಾಡಿಕೊಡಲಾಗುವುದು. ಉದ್ಘಾಟನೆವರೆಗೂ ಬೈಕ್, ಆಟೋಗಳು ಎಕ್ಸ್‌ಪ್ರೆಸ್ ವೇನಲ್ಲಿ ಸಾಗಬಹುದು. ಆದರೆ, ಉದ್ಘಾಟನೆ ನಂತರ ಸರ್ವಿಸ್ ರಸ್ತೆಯಲ್ಲೇ ಸಾಗಬೇಕು ಎಂದು ಹೇಳಿದರು.

ಹೆಸರಿಡುವ ಪರಂಪರೆ ಇಲ್ಲ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಹಿರಿಯ ರಾಜಕಾರಣಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಕೂಡ ಪತ್ರ ಬರೆದು ಮನವಿ ಮಾಡಿದ್ದಾರೆ. ನಮಗೂ ನಾಲ್ವಡಿ ಒಡೆಯರ್ ಹೆಸರು ಇಡಬೇಕೆಂಬ ಆಸೆ ಇದೆ. ಜೊತೆಗೆ ನಮ್ಮ ಭಾರತ ದೇಶದಲ್ಲಿ ನದಿಗಳಿಗೆ ಮಹತ್ವ ಇದೆ. ಕಾವೇರಿ ಈ ಭಾಗದ ಜನರ ಜೀವನಾಡಿ ಆಗಿದ್ದಾಳೆ. ಹಾಗಾಗಿ ಕಾವೇರಿ ಎಕ್ಸ್‌ಪ್ರೆಸ್ ವೇ ಎಂದು ಇಡಬೇಕು ಅಂತಾ ಯೋಚಿಸಿದ್ದೆವು. ಆದರೆ, ಹೆದ್ದಾರಿಗೆ ವ್ಯಕ್ತಿಯ ಹೆಸರು ಇಟ್ಟಿರುವ ನಿದರ್ಶನ ಇಲ್ಲ ಎಂದು ಹೇಳಿದರು. ಹಾಗೆಯೇ ಪ್ರಸಾದ್ ಯೋಜನೆಯಡಿ ಚಾಮುಂಡಿಬೆಟ್ಟಕ್ಕೆ ಹಣ ಬಿಡುಗಡೆ ಆಗಿದೆ. ಬೆಟ್ಟದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮೈಸೂರು ಭಾಗದ ಅಭಿವೃದ್ಧಿಗೆ ಮತ್ತೊಂದು ಯೋಜನೆ ಬಂದಿದೆ. ಸ್ವದೇಶ್ ದರ್ಶನ್ ಅಡಿಯಲ್ಲಿ ವರ್ಷ ಪೂರ್ತಿ ವಸ್ತು ಪ್ರದರ್ಶನ ನಡೆಸಲಾಗುವುದು ಎಂದು ಹೇಳಿದರು.











Click it and Unblock the Notifications