ಮೈಸೂರು-ನಂಜನಗೂಡು ರಸ್ತೆಯನ್ನು ಷಟ್ಪಥವಾಗಿ ಪರಿವರ್ತಿಸಲು NHAI ಅನುಮೋದನೆ: ಪ್ರತಾಪ್ ಸಿಂಹ
ಮೈಸೂರು, ಸೆಪ್ಟೆಂಬರ್, 03: ಮೈಸೂರು-ನಂಜನಗೂಡು ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಮಾಡಲು ಡಿಪಿಆರ್ ತಯಾರಿಸಲು ಪ್ರಾಧಿಕಾರ ಅನುಮತಿ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಮೈಸೂರು-ತಿ.ನರಸೀಪುರ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು-ನಂಜನಗೂಡು ರಸ್ತೆಯನ್ನು ಷಟ್ಪಥವಾಗಿ ಪರಿವರ್ತಿಸಲು ಡಿಪಿಆರ್ ತಯಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿದೆ. ಪ್ರಸ್ತುತ ರಸ್ತೆಯಂಚಿನ ಗಿಡಗಳನ್ನು ತೆಗೆದು 127 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗಿದೆ ಎಂದರು.

ಮೈಸೂರು-ನಂಜನಗೂಡು ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಮಾಡಲು ಡಿಪಿಆರ್ ತಯಾರಿಸಲು ಪ್ರಾಧಿಕಾರ ಅನುಮತಿ ನೀಡಿದೆ. ವಿಮಾನ ನಿಲ್ದಾಣದ ಸಮೀಪ ಹಾದು ಹೋಗುವ ಬದಲಿಗೆ ಬೇರೆ ಕಡೆ ತಿರುವು ಪಡೆಯಲು 23 ಕಿ.ಮೀಟರ್ ಅಂತರದ ಜೊತೆಗೆ ಹೆಚ್ಚುವರಿ 5 ಕಿ.ಮೀ ಗಳಾಗಲಿದೆ. ಹಾಗಾಗಿ, ಡಿಪಿಆರ್ ತಯಾರಾದ ಬಳಿಕ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ 75 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ ಎಂದರು.
ತಿ.ನರಸೀಪುರ ರಸ್ತೆಯಲ್ಲಿ ಆಗಿಂದಾಗ್ಗೆ ಅಪಘಾತ ಪ್ರಕರಣಗಳು ಸಂಭವಿಸುತ್ತಿರುವುದಕ್ಕೆ ಜಂಗಲ್ ಬೆಳೆದುಕೊಂಡಿರುವುದು ಕಾರಣ ಎನ್ನುವ ಮಾತು ಬಂದಿತ್ತು. ಕೆಲವು ಕಡೆಗಳಲ್ಲಿ ರಸ್ತೆ ಹಾಳಾಗಿದ್ದರಿಂದ ಸಮಸ್ಯೆಯಾಗಿತ್ತು. ಹಾಗಾಗಿ, ಎನ್‌ಎಚ್-766 ರಸ್ತೆಯಲ್ಲಿ ತಿ.ನರಸೀಪುರದಿಂದ ಆಲದಮರದ ತನಕ ಜಂಗಲ್‌ಗಳನ್ನು ತೆಗೆದು ಡಾಂಬರೀಕರಣ ಮಾಡಲಾಗುತ್ತದೆ. ಆಲನಹಳ್ಳಿ ರಿಂಗ್ ರಸ್ತೆಯ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲಾಗುವುದು ಎಂದರು
ಪಾಲಿಕೆಗೆ ಮೇಯರ್ ಅವರೇ ಸುಪ್ರೀಂ ಎನ್ನುವುದು ಗೊತ್ತಿದ್ದರೂ ಅವರ ಗಮನಕ್ಕೆ ತಾರದೆ ಸಭೆ ರದ್ದುಪಡಿಸಿದ್ದಾರೆ. ಯಾವುದೇ ಪಕ್ಷ ಆಡಳಿತದಲ್ಲಿ ಇರುವುದು ಮುಖ್ಯವಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಆಡಳಿತ ನಡೆಯಬೇಕು ಎಂದು ವಾಗ್ದಾಳಿ ನಡೆಸಿದರು. ನಗರಾಭಿವೃದ್ಧಿ ಸಚಿವರು ಕರೆದಿರುವ ಸಭೆಗೆ ಆಯುಕ್ತರು ಹೋಗಿ ಉಳಿದವರನ್ನು ಸಭೆಗೆ ಕಳುಹಿಸಬೇಕಿತ್ತು. ಆದರೆ, ಇಡೀ ಆಡಳಿತ ವರ್ಗದವರನ್ನೇ ಬೆಂಗಳೂರಿಗೆ ಕರೆಯಿಸಿ ಸಭೆ ಮಾಡಿದ್ದನ್ನು ನೋಡಿದರೆ ಉದ್ದೇಶಪೂರ್ವಕವಾಗಿ ಕರೆದಿರುವುದು ಕಾಣಿಸುತ್ತದೆ ಎಂದು ಟೀಕಿಸಿದರು.
ಈ ವೇಳೆ ಮೇಯರ್ ಶಿವಕುಮಾರ್, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ರಾಜ್‌ಕುಮಾರ್ ಗುಪ್ತಾ ಸೇರಿದಂತೆ ಮತ್ತತರರು ಹಾಜರಿದ್ದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ
ಇನ್ನು ಈ ಬಾರಿ ಎಂಪಿ ಚುನಾವಣೆಯಲ್ಲಿ ಪ್ರತಾಪ್ ಸಿಂಹನನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಜನ ನನ್ನನ್ನು ಏಕೆ ಸೋಲಿಸಬೇಕು ಎಂಬುದಕ್ಕೆ ಅವರು ಕಾರಣ ನೀಡಲಿ ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯಗೆ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಕುವೆಂಪುನಗರದಲ್ಲೋ, ಸರಸ್ವತಿಪುರಂನಲ್ಲೋ, ಸಿದ್ದಾರ್ಥ ಬಡಾವಣೆಯಲ್ಲೋ ಬಂದು ಸಿಎಂ ಈ ರೀತಿ ಹೇಳೋಕೆ ಆಗಲ್ಲ. ಉದಯಗಿರಿಯಲ್ಲಿ ಹೋಗಿ ಕೈ ಮುಗಿದು ನನ್ನನ್ನು ಸೋಲಿಸಲು ಕರೆ ಕೊಟ್ಟಿದ್ದಾರೆ. ಕೈಮಗಿದು ಪ್ರತಾಪ್ ಸಿಂಹನನ್ನು ಸೋಲಿಸಿ ಎಂದು ಕೇಳುವ ದಯನೀಯ ಸ್ಥಿತಿ ಸಿಎಂಗೆ ಬರಬಾರದಿತ್ತು. ಅಷ್ಟಕ್ಕೂ ನನ್ನನ್ನು ಜನರು ಏಕೆ ಸೋಲಿಸಬೇಕು ಎಂಬುದಕ್ಕೆ ಐದು ಕಾರಣಗಳನ್ನು ನೀಡಲಿ ಎಂದು ಸವಾಲು ಹಾಕಿದರು.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಮಾಡಿಸಿದ್ದು ನನ್ನ ತಪ್ಪಾ? ಗ್ರೇಟರ್ ಮೈಸೂರು ಮಾಡಲು ಹೊರಟ್ಟಿದ್ದು ತಪ್ಪಾ? ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಹೊರಟ್ಟಿದ್ದು, ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಪಾ? ಎಂದು ಪ್ರಶ್ನಿಸುವ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
40 ವರ್ಷದಿಂದ ಸಿದ್ದರಾಮಯ್ಯ ರಾಜಕೀಯದಲ್ಲಿದ್ದಾರೆ. ಅವರು ಮೈಸೂರಿಗೆ ಮಾಡಿರುವ ಕೆಲಸ ಏನು ಎಂಬುದನ್ನು ಹೇಳಲಿ. ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತಾ ಕೈ ಮುಗಿದು ಸಿಎಂ ಕೇಳಿದರೆ ಜನ ಅದನ್ನು ಒಪ್ಪುತ್ತಾರಾ? ಎಂದರು. ಅಲ್ಲದೆ ಸಿದ್ದರಾಮಯ್ಯ ಅವರಿಗೆ ಬಡವರ ಮಕ್ಕಳು ಉದ್ಧಾರವಾಗಬಾರದು. ಅವರ ಮಕ್ಕಳು ಮಾತ್ರ ರಾಜಕಾರಣ ಮಾಡುತ್ತಾ ಇರಬೇಕು ಅಷ್ಟೇ. ಸಿದ್ದರಾಮಯ್ಯ ಪ್ರತಿ ಬಾರಿಯೂ ಮೋದಿ ವಿರುದ್ಧ ಮಾತಾಡುತ್ತಾರೆ. ಇದು ಒಂಥರಾ ಆಕಾಶದ ಕಡೆ ಮುಖ ಮಾಡಿ ಉಗಿದಂತೆ ಎಂದು ಟೀಕಿಸಿದರು.












Click it and Unblock the Notifications