ಮೈಸೂರಿನಲ್ಲಿ ನರೇಂದ್ರ ಸಹೋದರ ಪ್ರಹ್ಲಾದ್ ಮೋದಿ
ಮೈಸೂರು, ಫೆ. 2 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ್ಯಕ್ಕೆ ಮಾರು ಹೋಗಿದ್ದು ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ಸಂತಸ ಪಡುತ್ತಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಅವರು ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆಗೆ ತೆರಳಿ ಅರಮನೆಯಲ್ಲಿರುವ ಅಂಬಾರಿ, ದರ್ಬಾರ್ ಹಾಲ್, ಕಲ್ಯಾಣ ಮಂಟಪ, ಆಯುಧ ಶಾಲೆ, ಪರಿಕರ, ವಸ್ತುಸಂಗ್ರಹಾಲಯ ಮೊದಲಾದವುಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಈ ಸಂದರ್ಭ ಅವರೊಂದಿಗೆ ಮೈಸೂರಿನ ಬಿಜೆಪಿ ಮುಖಂಡರು ಜೊತೆಗಿದ್ದು ಮಾಹಿತಿ ನೀಡಿದರಲ್ಲದೆ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಅರಮನೆ ಆವರಣದಲ್ಲಿ ಅಡ್ಡಾಡಿದ ಅವರು ಸೋಮೇಶ್ವರ ದೇವಸ್ಥಾನ, ಲಕ್ಷ್ಮೀರಮಣ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನಗಳಲ್ಲಿ ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭ ನಗರದ ಮೃಗಾಲಯಕ್ಕೂ ಭೇಟಿ ಇಲ್ಲಿರುವ ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಸೂರಿನ ವಾತಾವರಣ, ಸುಂದರ ತಾಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಮೊದಲ ಭೇಟಿ ಎಂದ ಅವರು ಮೈಸೂರು ಮಹಾರಾಜರುಗಳ ಸಾಧನೆ ಶ್ಲಾಘನೀಯ ಎಂದರು.

ಈ ಸಂದರ್ಭ ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯಂ, ಬಿಜೆಪಿ ನಗರಾಧ್ಯಕ್ಷ ಮಾರುತಿರಾವ್ ಪವಾರ್ ಮೊದಲಾದರು ಇದ್ದರು. ಆ ನಂತರ ಬೆಂಗಳೂರು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಿದರು.












Click it and Unblock the Notifications