ಪಕ್ಕಾ ಸಿನಿಮಾ ಸ್ಟೋರಿ: ನಂಜನಗೂಡಿನಲ್ಲಿ ಹೆಣ್ಣುಮಕ್ಕಳ ನಿದ್ದೆಗೆಡಿಸಿದ್ದ ಸೈಕೋ ಶಿವಣ್ಣ ಸಿಕ್ಕಿಬಿದ್ದಿದ್ದೇಗೆ?
ಮೈಸೂರು, ಡಿಸೆಂಬರ್ 10: ಸಮಾಜದಲ್ಲಿ ಎಂತಹ ಸೈಕೋಗಳಿರುತ್ತಾರೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ಈ ಸೈಕೋ ಮಾಡುತ್ತಿದ್ದ ವಿಕೃತಿಯಿಂದ ಗ್ರಾಮದ ಮನೆಗಳಲ್ಲಿ ಗಂಡ ಹೆಂಡತಿ ಜಗಳವಾಡಿದ್ದರು, ಮದುವೆಗಳು ನಿಂತು ಹೋಗಿದ್ದವು. ಹಾಗಾದರೆ ಸೈಕೋ ಮಾಡುತ್ತಿದ್ದದಾದರೂ ಏನು? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಸದ್ಯ ಸೈಕೋ ಮಾಡುತ್ತಿದ್ದ ವಿಕೃತಿಯಿಂದ ನಲುಗಿದ್ದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ವರದರಾಜಸ್ವಾಮಿ ಬಡಾವಣೆ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಕಳೆದ ಹಲವು ಸಮಯಗಳಿಂದ ನಡೆಯುತ್ತಿದ್ದ ವಿಲಕ್ಷಣ ಘಟನೆಯಿಂದ ಜನ ನಲುಗಿ ಹೋಗಿದ್ದರು. ಇದ್ದಕ್ಕಿದ್ದಂತೆಯೇ ರಾತ್ರಿ ಬೆಳಗಾಗುವುದರೊಳಗೆ ಮನೆ ಮುಂದೆ ಕಾಗದದ ಚೀಟಿಗಳು ಸಿಗುತ್ತಿದ್ದವು. ಈ ಚೀಟಿಯನ್ನು ಬಿಚ್ಚಿ ನೋಡಿದರೆ ಅದರಲ್ಲಿ ಅಶ್ಲೀಲ ಚಿತ್ರ ಬರೆದು ಮನೆಯವರ ಹೆಸರು ಹಾಕಿರುತ್ತಿತ್ತು.

ಈ ಅಸಭ್ಯ ಚಿತ್ರ ಮತ್ತು ಬರಹಗಳಿಂದ ಮನೆಯ ವಾತಾವರಣವೇ ಹಾಳಾಗಿ ಬಿಡುತ್ತಿತ್ತು. ಕೆಲವು ಮನೆಗಳಲ್ಲಿ ಜಗಳಗಳಾಗಿದ್ದರೆ, ಹೆಣ್ಣುಮಕ್ಕಳಿಗೆ ಮುಜುಗರ ತಂದೊಡ್ಡುತ್ತಿತ್ತು. ಇದು ಆಗಾಗ್ಗೆ ಬಡಾವಣೆಯ ಒಂದಲ್ಲ ಒಂದು ಮನೆಯಲ್ಲಿ ನಡೆಯುತ್ತಿದ್ದರಿಂದ ಜನ ರೋಷಿ ಹೋಗಿದ್ದರು. ಅದರಲ್ಲೂ ಹೆಣ್ಣು ಮಕ್ಕಳು ಯಾವಾಗ ನಮ್ಮ ಬಗ್ಗೆ ಕೆಟ್ಟದಾಗಿ ಬರೆದು ಮಾನ ಮರ್ಯಾದೆ ತೆಗೆದು ಬಿಡುತ್ತಾರೋ ಎಂದು ಭಯದಲ್ಲಿಯೇ ಬೆಳಿಗ್ಗೆ ಮನೆಯ ಬಾಗಿಲು ತೆಗೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಷ್ಟಕ್ಕೂ ಈ ರೀತಿ ಚೀಟಿ ಬರೆದು, ಚಿತ್ರ ಬಿಡಿಸಿ ಇಡುತ್ತಿರುವವರು ಯಾರು ಎಂಬುದು ಮಾತ್ರ ಗೊತ್ತೇ ಆಗಿರಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ಹುಡುಕಲೇ ಬೇಕೆಂಬ ಹಠಕ್ಕೆ ಬಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ವಿಕೃತ ಮನಸ್ಸಿನ ಆ ಸೈಕೋ ಮಾತ್ರ ಮಹಿಳೆಯರು, ಯುವತಿಯರ ಬಗ್ಗೆ ಅಸಭ್ಯವಾಗಿ ಲೈಂಗಿಕ ಚಿತ್ರಗಳನ್ನು ಬಿಡಿಸಿ ಹೆಸರುಗಳನ್ನು ನಮೂದಿಸಿ ಮನೆಗಳ ಮುಂದೆ ಇಟ್ಟು ಮಾನಸಿಕವಾಗಿ ಕಿರುಕುಳ ನೀಡುತ್ತಾ ವಿಕೃತ ಖುಷಿಪಡುವುದನ್ನು ಮುಂದುವರೆಸಿದ್ದನು.
ಗ್ರಾಮದಲ್ಲಿ ಇಂತಹ ಘಟನೆಗಳು ನಡೆದು ಜನ ರೊಚ್ಚಿಗೆದ್ದಾಗ ಗ್ರಾಮದ ಮುಖಂಡ ಎನಿಸಿಕೊಂಡಿದ್ದ ಶಿವಣ್ಣ(54) ಎಂಬಾತ ಮುಂದೆ ಬಂದು ಆತನನ್ನು ಬಿಡಬಾರದು ಹೇಗಾದರೂ ಮಾಡಿ ಹಿಡಿಯಲೇ ಬೇಕೆಂದು ಹೇಳುತ್ತಿದ್ದ ಜೊತೆಗೆ ಜನರೊಂದಿಗೆ ಕಾಯುತ್ತಾ ಕುಳಿತು ಕೊಳ್ಳುತ್ತಿದ್ದ ಆದರೂ ಊರೊಳಗೆ ವಿಕೃತ ಬರಹದ ಚೀಟಿಗಳು ಮಾತ್ರ ಸಿಗುತ್ತಲೇ ಇತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದು ನಡೆಯುತ್ತಲೇ ಬರುತ್ತಿತ್ತು.
ಕಳಚಿ ಬಿದ್ದ ಮುಖಂಡನ ಮುಖವಾಡ
ಈ ನಡುವೆ ಗ್ರಾಮದ ಮುಖಂಡ ಶಿವಣ್ಣನ ಅನುಪಸ್ಥಿತಿಯಲ್ಲಿ ಕೆಲವರು ಸೈಕೋನನ್ನು ಹಿಡಿಯುವ ಸಲುವಾಗಿ ಹೊಂಚು ಹಾಕಿ ಕೂತಿದ್ದರು. ಈ ವಿಚಾರ ಗ್ರಾಮದ ಮುಖಂಡ ಎನ್ನುವಂತೆ ಓಡಾಡುತ್ತಿದ್ದ ಶಿವಣ್ಣನಿಗೂ ಗೊತ್ತಿರಲಿಲ್ಲ. ಹೀಗಾಗಿ ರಾತ್ರಿ ವೇಳೆ ಕಾಯುತ್ತಾ ಕೂತಿದ್ದ ಸಂದರ್ಭ ವ್ಯಕ್ತಿಯೊಬ್ಬ ಬಡಾವಣೆಗೆ ಸೈಕಲ್ ನಲ್ಲಿ ಬಂದು ಮನೆಯ ಮುಂದೆ ಚೀಟಿ ಇಡುವುದು ಕಾಣಿಸಿದೆ. ಕೂಡಲೇ ಎಚ್ಚೆತ್ತು ಕೊಂಡ ಗ್ರಾಮದ ಜನ ಅವನನ್ನು ಸುತ್ತುವರೆದು ಹಿಡಿದು ನೋಡಿದಾಗ ಆತ ಗ್ರಾಮದ ಮುಖಂಡ ಶಿವಣ್ಣನಾಗಿದ್ದನು.
ಸ್ಥಳದಲ್ಲಿಯೇ ಆತನನ್ನು ಹಿಡಿದು ತದಕಿದ ಗ್ರಾಮಸ್ಥರು ಬಳಿಕ ಹುಲ್ಲಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಸೈಕೋ ಶಿವಣ್ಣನ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ತಮ್ಮೊಂದಿಗೆ ಇದ್ದು ತಮ್ಮ ವಿರುದ್ಧವೇ ವಿಕೃತವಾಗಿ ಚೀಟಿಗಳನ್ನು ಬರೆದು ಗ್ರಾಮದ ಹೆಣ್ಣುಮಕ್ಕಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಶಿವಣ್ಣನ ಸೈಕೋ ಮನಸ್ಥಿತಿ ಕಳಚಿದ್ದು, ಗ್ರಾಮದ ಹೆಣ್ಣುಮಕ್ಕಳು ಇದೀಗ ನೆಮ್ಮದಿಯುಸಿರು ಬಿಟ್ಟಿದ್ದಾರೆ.












Click it and Unblock the Notifications