ಮೈಸೂರಲ್ಲಿ ನ.23ರಿಂದ ತಿಂಡಿ ಮೇಳ, ಭೂರಿ ಭೋಜನ ಸವಿಯಲು ಸಿದ್ಧರಾಗಿ
ಮೈಸೂರು, ನವೆಂಬರ್ 22: ಪ್ರಸಿದ್ಧ ದಸರಾ ಆಹಾರ ಮೇಳದ ಬಳಿಕ ಮೈಸೂರಿನಲ್ಲಿ ವೆರೈಟಿಯಾದ ಸಸ್ಯಹಾರಿ ಆಹಾರಗಳನ್ನು ಸವಿಯುವ ಮತ್ತೊಂದು ಅವಕಾಶ ದೊರೆತಿದೆ. ಭಾಗ್ಯಲಕ್ಷ್ಮಿ ಫುಡ್ಸ್ ಸಂಸ್ಥೆ ವತಿಯಿಂದ 'ಭಾಗಲಕ್ಷ್ಮಿ ನಮ್ಮೂರ ತಿಂಡಿ 2017-18' ಮೇಳವನ್ನು ನ.23 ರಿಂದ 26ರವರೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ 'ಮೈಸೂರ ಅಡುಗೆ ಮಹಾರಾಣಿ'ಯನ್ನು ಆಯ್ಕೆ ಮಾಡಲಿದ್ದು, ಸಿಹಿಕಹಿ ಚಂದ್ರು ಅವರೊಂದಿಗೆ ವೇದಿಕೆಗೆ ಮೇಲೆ ಅಡುಗೆ ಮಾಡುವ ಅವಕಾಶ ಲಭಿಸಲಿದೆ. ದಂಪತಿಗಳಿಗಾಗಿ ಸಖತ್ ಜೋಡಿ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆ, 60 ಸೆಕೆಂಡ್ ಮತ್ತು ಲಕ್ಕಿ ಡ್ರಾ ನಡೆಯಲಿದೆ.
ಮೇಳದಲ್ಲಿ 150ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಮಹಿಳೆಯರಲ್ಲಿನ ಅಡುಗೆ ಕೌಶಲ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಿದ್ದು, ಕಳೆದ ವರ್ಷ ಏರ್ಪಡಿಸಿದ್ದ ತಿಂಡಿ ಮೇಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷ ಮತ್ತೆ ನಮ್ಮೂರ ತಿಂಡಿ ಮೇಳ ಆಯೋಜಿಸಲಾಗಿದೆ ಎಂದು ಮೇಳದ ವ್ಯವಸ್ಥಾಪಕರಾದ ಭಾಗ್ಯಲಕ್ಷ್ಮಿ ಎಂಟರ್‍ಪ್ರೈಸಸ್ ನ ನಿರ್ದೇಶಕ ತನಯ್ ಬೈಸಾನಿ ತಿಳಿಸಿದರು.

ಆಹಾರವನ್ನು ಸವಿದು ಸಂಭ್ರಮಿಸುವ ಜೊತೆಗೆ ಮನರಂಜನೆಗೂ ಇಲ್ಲಿ ಅವಕಾಶವಿದೆ. ಮೇಳದ ನಾಲ್ಕು ದಿನಗಳಲ್ಲೂ ಮಹಿಳೆಯರು, ಮಕ್ಕಳಿಗೆ ನಾನಾ ರೀತಿಯ ಸ್ಪರ್ಧೆಗಳಿವೆ. ಮೈಸೂರು ಅಡುಗೆ ಮಹಾರಾಣಿ, ಮೈಸೂರು ಮುದ್ದು ಮಗು, ಅಲಂಕಾರಿಕ ಉಡುಪು ಸ್ಪರ್ಧೆ ಏರ್ಪಡಿಸಿದೆ.
ಅಲ್ಲದೇ 23ರಂದು ಸಂಜೆ 6 ಗಂಟೆಗೆ ಸುಧಾ ಬರಗೂರು ಅವರಿಂದ ಹಾಸ್ಯ ಮೇಳ, 24ರಂದು ಸಂಜೆ 7 ಗಂಟೆಗೆ ವಿಜಯ್ ಪ್ರಕಾಶ್ ಮತ್ತು ಅನುರಾಧಾ ಭಟ್ ಅವರಿಂದ ಸಂಗೀತ ಸಂಜೆ, 25ರಂದು ಸಂಜೆ 6.30 ಗಂಟೆಗೆ ಬೀಟ್ ಗುರೂಸ್ ಬೀಟ್ಸ್ ಮೇಳ, 26ರಂದು ಮಧ್ಯಾಹ್ನ 3.30 ಗಂಟೆಗೆ ಸಿಹಿಕಹಿ ಚಂದ್ರು ಅವರಿಂದ ಅಡುಗೆ ಕಾರ್ಯಕ್ರಮ, 6.30 ಗಂಟೆಗೆ ಮಿಮಿಕ್ರಿ ಗೋಪಿ ಅವರ ಮಿಮಿಕ್ರಿ ಕಾರ್ಯಕ್ರಮವಿದೆ ಎಂದು ಹೇಳಿದರು. ನ.23ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ತಿಂಡಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ.












Click it and Unblock the Notifications