ಭರದಿಂದ ಸಾಗಿದ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿ
ಮೈಸೂರು, ಮೇ, 28: ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಈಗಾಗಲೇ ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆ ಹೆಚ್ಚುವರಿ 3 ಪ್ಲಾಡ್‌ಫಾರಂ, 4 ಹೊಸ ಸ್ಟೇಬಲಿಂಗ್ ಲೈನ್‌ಗಳು, 4 ಪಿಟ್ ಲೈನ್ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ಹಾಗೆಯೇ ಮೈಸೂರು ಮುಖ್ಯ ರೈಲ್ವೆ ಸ್ಟೇಷನ್ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಅಶೋಕಪುರಂ ರೈಲ್ವೆಯಾರ್ಡ್ ಅನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 2ನೇ ದೊಡ್ಡ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ ಎರಡು ಸ್ಟೇಬಲಿಂಗ್ ಲೈನ್, ಎರಡು ಪಿಟ್ ಲೈನ್, ಎರಡು ಹೊಸ ಪ್ಲಾಟ್ ಫಾರ್ಮ್ ನಿರ್ಮಿಸಲಾಗಿದೆ. ಅಲ್ಲದೇ ನಿಲ್ದಾಣಕ್ಕೆ ಮತ್ತೊಂದು ಪ್ರವೇಶ ಧ್ವಾರವನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳನ್ನು ಪರಿಶೀಲಿಸಿದ್ದೇನೆ, ಎಂದು ತಿಳಿಸಿದರು.

ಚಾಮರಾಜನಗರದ ಕಡೆ ಹೋಗುವ ರೈಲುಗಳು ಸರಾಗವಾಗಿ ಹೋಗಲು ಹಳಿಗಳನ್ನು ಲಿಂಕ್ ಮಾಡಲಾಗಿದೆ. ಓವರ್ ನೈಟ್ ರೈಲುಗಳನ್ನು ಇಲ್ಲಿ ನಿಲ್ಲಿಸಲು ಕೂಡ ಅನುಕೂಲವಾಗುತ್ತದೆ. ಅಲ್ಲದೆ ಓವರ್ ಬ್ರಿಡ್ಜ್ ನಿರ್ಮಿಸಲಾಗಿದೆ. ದ್ವಿಚಕ್ರ ವಾಹನಗಳ ನಿಲುಗಡೆ ಪಾರ್ಕಿಂಗ್ ಕೂಡ ಮಾಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ನಗರದ ಜನತೆ ಸದ್ಯದಲ್ಲಿಯೇ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಆಗಸ್ಟ್ 15ರೊಳಗೆ ಕಾಮಗಾರಿ ಮುಕ್ತಾಯ
ಮುಖ್ಯ ರೈಲ್ವೆ ನಿಲ್ದಾಣಕ್ಕೆ ನಿತ್ಯ ಒಟ್ಟು 34 ರೈಲು ಬರುತ್ತವೆ. ಹಾಗಾಗಿ, ಅಲ್ಲಿ ಒತ್ತಡ ಹೆಚ್ಚಿದೆ. ಈ ಕಾರಣಕ್ಕೆ ಈಗಾಗಲೇ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ಕೂಡ ಮಾಡಲಾಗಿದೆ. ಈಗ ಅಶೋಕಪುರಂ ರೈಲು ನಿಲ್ದಾಣವನ್ನು ಹೊಸ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಆಗಸ್ಟ್ 15ರೊಳಗೆ ಈ ಸೇವೆ ಜನರಿಗೆ ದೊರೆಯಲಿದೆ. ಈ ಸಂಬಂಧ ಮುಂದಿನ ಕೆಲವು ದಿನಗಳಲ್ಲಿ ಸಭೆಯನ್ನು ಕರೆಯುತ್ತೇವೆ ಎಂದರು.
ಈ ವೇಳೆ ಶಾಸಕ ಶ್ರೀವತ್ಸ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ರೈಲ್ವೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ವಿಶ್ವದರ್ಜೆಗೇರಲಿರುವ ಮೈಸೂರು ರೈಲ್ವೆ ನಿಲ್ದಾಣ
ಹಾಗೆಯೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಸಾಂಸ್ಕೃತಿಕ ನಗರಿ ಮೈಸೂರು ಜನರ ಬಹುನಿರೀಕ್ಷೆಯ ಕೇಂದ್ರ ರೈಲ್ವೆ ನಿಲ್ದಾಣ ವಿಸ್ತರಣೆ ಯೋಜನೆಯ ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಿ, ಕೆಲವೇ ತಿಂಗಳುಗಳಲ್ಲಿ ನಿಲ್ದಾಣ ಸುಂದರ ಆಧುನಿಕ ರೂಪ ಪಡೆದುಕೊಂಡು ವಿಶ್ವ ದರ್ಜೆಯ ಸೇವೆಯನ್ನು ಪ್ರಯಾಣಿಕರಿಗೆ ನೀಡಲಿದೆ.
ಸುಮಾರು ಎಂಟು ದಶಕಗಳ ಹಿಂದೆ ಅಂದರೆ 1940ರಲ್ಲಿ ಸ್ಥಾಪನೆಯಾಗಿರುವ ಈ ರೈಲು ನಿಲ್ದಾಣವು ಇಂದು ಜನಸಂಖ್ಯೆ ಆಧಾರದಲ್ಲಿ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ವಿಸ್ತರಣೆ ಅಗತ್ಯವಾಗಿದೆ. ಇದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯು ಆಗಿತ್ತು.
ಈ ಕಾರಣದಿಂದಲೇ ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಕಳೆದ ವರ್ಷ 2022ರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ 346.64 ಕೋಟಿ ರೂ. ವೆಚ್ಚದ ಯೋಜನೆಯಡಿ ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲಿಂದ ಈವರೆಗೂ ಅಭಿವೃದ್ಧಿ, ವಿಸ್ತರಣೆ ಹೇಗಿರಬೇಕು ಎಂದೆಲ್ಲ ನೀಲ ನಕ್ಷೆ ತಯಾರಿಸಲಾಗಿದೆ.
ಸದ್ಯ ಯೋಜನೆ ಅನುಷ್ಠಾನಕ್ಕಾಗಿ ಟೆಂಡರ್ ಕರೆಯಲಾಗಿದೆ, ಆದಷ್ಟು ಶೀಘ್ರವೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ರೈಲು ನಿಲ್ದಾಣ ವಿಸ್ತರಣಾ ಯೋಜನೆಯು ಪೂರ್ಣಗೊಳಿಸಲು 36 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಅಧಿಕಾರಿಗಳಾದ ಶಿಲ್ಪಿ ಅಗರ್‌ವಾಲ್ ತಿಳಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.











Click it and Unblock the Notifications