ಮೈಸೂರಿನಲ್ಲಿ 29 ಲಕ್ಷ ರೂ. ದರೋಡೆ ಪ್ರಕರಣ : ಮೂವರ ಸೆರೆ
ಮೈಸೂರು, ಜುಲೈ 10 : ಕಳೆದ ಹದಿನೇಳು ದಿನಗಳ ಕೆಳಗೆ ಗೋಕುಲಂನಲ್ಲಿ ಹಾಡಹಗಲೇ ನಡೆದಿದ್ದ 29 ಲಕ್ಷ ರೂ. ದರೋಡೆ ಪಕರಣಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಗುರಪ್ಪನಪಾಳ್ಯ ನಿವಾಸಿಗಳಾದ ಅಫ್ಸರ್ ಪಾಶ, ಶಬ್ಬೀರ್ ಮತ್ತು ಝಾಕಿರ್ ಎಂಬವರೇ ಬಂಧಿತರು.
ಕಳೆದ ಜೂ.23ರಂದು ನಗರದ ಗೋಕುಲಂನಲ್ಲಿರುವ ಕಚೇರಿಯೊಂದಕ್ಕೆ ನುಗ್ಗಿದ 10 ಮಂದಿಯ ತಂಡ ಅಲ್ಲಿದ್ದ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿ 29,66,840 ರೂ.ಗಳನ್ನು ದೋಚಿ ಪರಾರಿಯಾಗಿತ್ತು. ಹಾಡಹಗಲೇ ನಡೆದಿದ್ದ ಪಕರಣ ನಗರದ ವಾಣಿಜ್ಯ-ಉದ್ಯಮ ಲೋಕದವರಲ್ಲಿ ತಲ್ಲಣ ಮೂಡಿಸಿತ್ತು. ಪಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್ , ದರೋಡೆಕೋರರ ಬಂಧನಕ್ಕಾಗಿ ಸಿಸಿಬಿ ಪೊಲೀಸರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು.

ಸಿಸಿಬಿ ಎಸಿಪಿ ಗೋಪಾಲ್ ಹಾಗೂ ವಿವಿಪುರಂ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಸಿ.ವಿ.ರವಿ ಅವರನ್ನೊಳಗೊಂಡ ಪೊಲೀಸರ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು. ದರೋಡೆ ಪ್ರಕರಣದ ಆರೋಪಿಗಳು ಬೆಂಗಳೂರಿನ ಯಶವಂತಪುರದ ಬಳಿ ತಲೆಮರೆಸಿಕೊಂಡಿರುವ ವಿಚಾರ ಮಾಹಿತಿದಾರರಿಂದ ಪೊಲೀಸ್ ತಂಡಕ್ಕೆ ತಿಳಿದುಬಂದಿದೆ. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು, ತಿನಿಸುಗಳ ಖರೀದಿಗಾಗಿ ಬೇಕರಿ ಬಳಿ ಬಂದಿದ್ದ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನಂತರ ಆತನನ್ನು ವಿಚಾರಣೆಗೊಳಪಡಿಸಿದಾಗ ಮತ್ತಿಬ್ಬರು ಆರೋಪಿಗಳು ಅಡಗಿರುವ ಸ್ಥಳದ ಬಗ್ಗೆ ಆತ ಮಾಹಿತಿ ನೀಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸರು ಮತ್ತಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಸಂಬಂಧ 7 ಆರೋಪಿಗಳನ್ನು ಬಂಧೀಸಬೇಕಿದ್ದು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.











Click it and Unblock the Notifications