ಮೈಸೂರಿನಿಂದ ಬದನವಾಳುಗೆ ಪಾದಯಾತ್ರೆ ಆರಂಭ
ಮೈಸೂರು, ಏ. 16 : ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಏ.19ರಂದು ನಡೆಯಲಿರುವ 'ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ'ಕ್ಕೆ ಮೈಸೂರಿನಿಂದ ಪಾದಯಾತ್ರೆ ಮೂಲಕ ವಿವಿಧ ಸಂಘಟನೆಗಳ ಸದಸ್ಯರು ತೆರಳಲಿದ್ದು, ಬುಧವಾರ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ.
ಬುಧವಾರ ಮೈಸೂರಿನ ನ್ಯಾಯಾಲಯದ ಮುಂದಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಿರಿಯ ಸಾಹಿತಿ ಡಾ.ಪ್ರಭುಶಂಕರ ಪಾದಯಾತ್ರೆಗೆ ಚಾಲನೆ ನೀಡಿದರು. ಅಶೋಕ ವೃತ್ತ, ಜೆಎಲ್‌ಬಿ ರಸ್ತೆ, ಎಲೆ ತೋಟದ ರಸ್ತೆ ಮೂಲಕ ಸಾಗಿ ಪಾದಯಾತ್ರಿಗಳು ಗೆಜ್ಜೆಗಳ್ಳಿ ತಲುಪಿದ್ದಾರೆ. [ಬದನವಾಳು ಸತ್ಯಾಗ್ರಹ ಏಕೆ, ಏನು?]

ಚಾಮರಾಜನಗರದಿಂದ ಪಾದಯಾತ್ರೆ : ಗುರುವಾರ ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರದಿಂದ ಮತ್ತೊಂದು ತಂಡ ಪಾದಯಾತ್ರೆ ಆರಂಭಿಸಲಿದೆ. ಏ.17ರಂದು ಹೆಗ್ಗವಾಡಿ, 18ರಂದು ತಗಡೂರಿನಲ್ಲಿ ತಂಡ ವಾಸ್ತವ್ಯ ಹೂಡಲಿದ್ದು, ಏ.19ರಂದು ಬದನವಾಳು ತಲುಪಲಿದೆ. [ಬದನವಾಳು ಸತ್ಯಾಗ್ರಹ ಫೇಸ್ ಬುಕ್ ಪುಟ]
ಏ.17ರಂದು ಅಮೃತಭೂಮಿಯಿಂದ ಎತ್ತಿನ ಬಂಡಿಗಳಲ್ಲಿ ರೈತ ಸಂಘದ ಕಾರ್ಯಕರ್ತರು ಸಮಾವೇಶಕ್ಕಾಗಿ ಹೊರಡಲಿದ್ದಾರೆ ಎಂದು ದೀನಬಂಧು ಸಂಸ್ಥೆಯ ಜಿ.ಎಸ್.ಜಯದೇವ್ ಅವರು ಹೇಳಿದ್ದಾರೆ. ರೈತ ಸಂಘದ ಈ ತಂಡವು ಭಾನುವಾರ ಬದನವಾಳುಗೆ ಬಂದು ತಲುಪಲಿದೆ.
ಮಾರಾಟ ಮಳಿಗೆ ಸ್ಥಾಪನೆ : 'ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ' ನಡೆಯಲಿರುವ ಬದನವಾಳು ಖಾದಿ ಕೇಂದ್ರದ ಆವರಣದಲ್ಲಿ ಮಾರಾಟ ಮಳಿಗೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಚರಕ, ವನಶ್ರೀ ಮುಂತಾದ ಸಂಸ್ಥೆಗಳು ತಮ್ಮ ಸಾಮಾಗ್ರಿಗಳನ್ನು ಮಾರಾಟ ಮಾಡಲಿವೆ.
ಮೈಸೂರು ಜಿಲ್ಲೆಯ ದಕ್ಷಿಣ ತುದಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಅಂಟಿಕೊಡಂತಿರುವ ಬದನವಾಳು ಗ್ರಾಮದಲ್ಲಿ ಏ.19ರ ಭಾನುವಾರ 'ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ' ನಡೆಯಲಿದೆ. 'ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ'ವು ಬದನವಾಳು ಸತ್ಯಾಗ್ರಹ ಹಾಗೂ ರಾಷ್ಟ್ರೀಯ ಸಮಾವೇಶಕ್ಕೆ ಕರೆ ನೀಡಿದೆ.












Click it and Unblock the Notifications