ಮೈಸೂರು ಮಹಾನಗರ ಪಾಲಿಕೆ ಉಪ ಚುನಾವಣೆ; 6 ನಾಮಪತ್ರ ಸಲ್ಲಿಕೆ
ಮೈಸೂರು, ಆಗಸ್ಟ್ 24: ಮೈಸೂರು ಮಹಾನಗರ ಪಾಲಿಕೆ ಉಪ ಚುನಾವಣೆ ಗರಿಗೆದರಿದ್ದು, 36ನೇ ವಾರ್ಡ್‌ಗೆ ಉಪ ಚುನಾವಣೆ ನಡೆಯುತ್ತಿದೆ. ಸೋಮವಾರವೇ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಸೇರಿ ಒಟ್ಟು 6 ನಾಮಪತ್ರ ಸಲ್ಲಿಕೆಯಾಗಿದೆ. ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಪಾಲಿಕೆ ಸದಸ್ಯತ್ವ ರದ್ದಾದ ಹಿನ್ನೆಲೆ ಉಪ ಚುನಾವಣೆ ನಡೆಯುತ್ತಿದೆ.
ಬಿಜೆಪಿಯಿಂದ ಪಿ. ಶೋಭಾ, ಕಾಂಗ್ರೆಸ್‌ನಿಂದ ರಜನಿ ಅಣ್ಣಯ್ಯ, ಜೆಡಿಎಸ್‌ನಿಂದ ಎಸ್. ಲೀಲಾವತಿ ಮತ್ತು ಮೂವರು ಪಕ್ಷೇತರರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ನಾಳೆ ಬುಧವಾರ (ಆಗಸ್ಟ್ 25) ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆಯುತ್ತಿದ್ದು, ಮೊದಲ ಬಾರಿಗೆ ಮೇಯರ್ ಗದ್ದುಗೆ ಹಿಡಿಯಲು ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದೆ.
ಈ ಹಿಂದೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತ ನಡೆಸಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿಕ್ಕಟ್ಟು ಶುರುವಾಯಿತು.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಬಿಕ್ಕಟ್ಟಿನ ಲಾಭ ಪಡೆಯಲು ಬಿಜೆಪಿ ಇದೀಗ ಯತ್ನಿಸುತ್ತಿದೆ. ಕೊರೊನಾ ಭೀತಿ ನಡುವೆ ಚುನಾವಣೆ ಭರಾಟೆ ಜೋರಾಗಿ ನಡೆಯುತ್ತಿದೆ. ಸೆಪ್ಟೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.

ರುಕ್ಷ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು
ಮಹಾನಗರ ಪಾಲಿಕೆ ಚುನಾವಣೆಯಲ್ಲಿ 36ನೇ ವಾರ್ಡ್‌ನಲ್ಲಿ ಜೆಡಿಎಸ್‌ನ ರುಕ್ಷ್ಮಿಣಿ ಮಾದೇಗೌಡ ಜಯಗಳಿಸಿದ್ದರು. ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿಯೂ ರುಕ್ಷ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದರು.
ಆದರೆ 2018ರಲ್ಲಿ ನಡೆದ ಚುನಾವಣೆ ವೇಳೆ ನಕಲಿ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ರುಕ್ಷ್ಮಿಣಿ ಮಾದೇಗೌಡ ಸದಸ್ಯತ್ವವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಆದ್ದರಿಂದ ಈಗ ವಾರ್ಡ್‌ಗೆ ಉಪ ಚುನಾವಣೆ ನಡೆಯುತ್ತಿದೆ. 36ನೇ ವಾರ್ಡ್‌ನಲ್ಲಿ ರುಕ್ಷ್ಮಿಣಿ ಮಾದೇಗೌಡ ವಿರುದ್ಧ ಸೋಲು ಕಂಡಿದ್ದ ರಜನಿ ಅಣ್ಣಯ್ಯ ಆದಾಯ ಮುಚ್ಚಿಟ್ಟ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸದಸ್ಯತ್ವ ಅಸಿಂಧುಗೊಳಿಸಿದ ಹಿನ್ನಲೆಯಲ್ಲಿ ಈಗ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್‌ನಿಂದ ರಜನಿ ಅಣ್ಣಯ್ಯ ಉಪ ಚುನಾವಣೆ ಟಿಕೆಟ್ ಪಡೆದಿದ್ದಾರೆ. ಬಿಜೆಪಿ ಶಾಸಕ ಎಲ್. ನಾಗೇಂದ್ರರನ್ನು ಉಪ ಚುನಾವಣೆ ಉಸ್ತುವಾರಿಯಾಗಿ ನೇಮಕ ಮಾಡಿದೆ. ಕಳೆದ ಬಾರಿ 400 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ಈ ಬಾರಿ 36ನೇ ವಾರ್ಡ್‌ನಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಇದೆ.
ಕಾಂಗ್ರೆಸ್ ಸಂಪರ್ಕಕ್ಕೆ ಸಿಗದ ಸಾ.ರಾ. ಮಹೇಶ್
ನಾಳೆ ಮೈಸೂರು ಮೇಯರ್ ಹುದ್ದೆಗಾಗಿ ಚುನಾವಣೆ ನಡೆಯಲಿದ್ದು, ಇತ್ತ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. 2 ದಿನಗಳ ಹಿಂದೆ ಮಹೇಶ್‌ರನ್ನು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮೇಯರ್ ಚುನಾವಣೆ ಹಿನ್ನೆಲೆ ಭೇಟಿಯಾಗಿದ್ದರು.
ಮೊದಲ ಬಾರಿಗೆ ಬಿಜೆಪಿಯನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಹುದ್ದೆಗೆ ಏರಿಸಬೇಕು ಎಂಬ ಉದ್ದೇಶದಿಂದ ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತಿದೆ.
Recommended Video
ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಜೆಡಿಎಸ್ ಬೆಂಬಲಿಸುವ ಸಾಧ್ಯತೆ ಇದ್ದು, ಇದೇ ಕಾರಣಕ್ಕಾಗಿ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications