ಕೊರೊನಾ ಲಸಿಕೆ ಪಡೆದಿದ್ದ ಮೈಸೂರು ಮೇಯರ್‌ಗೆ ಕೋವಿಡ್ ಸೋಂಕು!
ಮೈಸೂರು, ಏಪ್ರಿಲ್ 2: ಮಾ.13ರಂದು ಕೊರೊನಾ ಲಸಿಕೆ ಪಡೆದಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಪತಿ ಮಾದೇಗೌಡ ಅವರಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಮೈಸೂರು ಮೇಯರ್ ಆದ ನಂತರ ರುಕ್ಮಿಣಿ ಮಾದೇಗೌಡ ಅವರು ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಇದೀಗ ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಮೈಸೂರು ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಹಜವಾಗಿ ಮೇಯರ್ ಅವರೊಂದಿಗೆ ಸಂಪರ್ಕದಲ್ಲಿದ್ದವರಿಗೆ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಪಾಲಿಕೆಯಲ್ಲಿ ಗುರುವಾರ ನಡೆದ ಸ್ಥಾಯಿ ಸಮಿತಿ ಸಭೆಗೆ ಮೇಯರ್ ರುಕ್ಮಿಣಿ ಮಾದೇಗೌಡ ಅವರು ಗೈರಾಗಿದ್ದರು.
ಇನ್ನು ಮಾ.3ರಂದು ಮೇಯರ್ ರುಕ್ಮಿಣಿ ಮಾದೇಗೌಡ ಅವರು ಕೋವಿಡ್ ಲಸಿಕೆಯನ್ನೂ ಪಡೆದಿದ್ದರು. ಆದರೆ ಕೊರೊನಾ ಲಸಿಕೆ ಪಡೆದರೂ ಸೋಂಕು ತಗುಲಿರುವುದು ಅಚ್ಚರಿ ಜೊತೆಗೆ ಆತಂಕಕ್ಕೂ ಕಾರಣವಾಗಿದೆ.