ಮೂರು ಕಾಸಿನ ಪ್ರಕಾಶ್ ರೈ, ವಾಚ್ ಕಿತ್ಕೊಂಡ ಸಿಎಂ : ಪ್ರತಾಪ್ ಸಿಂಹ
ಮೈಸೂರು, ಫೆಬ್ರವರಿ 28: ಸಮಾಜದಲ್ಲಿ ಪ್ರಕಾಶ್ ರೈಗೆ ಇರುವ ಬೆಲೆ ಒಂದು ರುಪಾಯಿ ಎಂಬುದನ್ನು ನ್ಯಾಯಾಲಯದಲ್ಲಿ ಅವರೇ ಒಪ್ಪಿಕೊಂಡಿದ್ದಾರೆ. ರೀಲ್ ಹಾಗೂ ರಿಯಲ್ ಲೈಫ್ ನಲ್ಲೂ ಪ್ರಕಾಶ್ ರೈಗೆ ಕೊಡುತ್ತಿರುವ ಬೆಲೆ ಮೂರು ಕಾಸಿನದ್ದಾಗಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆ ಹಿನ್ನೆಲೆಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಂಸದರು, ಪ್ರಕಾಶ್ ರೈಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಒಂದು ರುಪಾಯಿ ಬದಲಿಗೆ ಮೂರು ಕಾಸಿಗೆ ಮಾನ ನಷ್ಟ ಮೊಕದ್ದಮೆ ಹೂಡಲಿ ಎಂದು ಸಲಹೆ ನೀಡಿದರು.
ನಾನು ಇಲ್ಲದ ವೇಳೆ ಅವರ ಲೀಗಲ್ ನೋಟಿಸ್ ಬಂದಿತ್ತು. ಅದು ಹೈದರಾಬಾದ್ ನ ಜುಬಿಲಿ ಹಿಲ್ಸ್ ಪ್ರಕಾಶ್ ರಾಜ್ ಹೆಸರಲ್ಲಿ ಬಂದಿತ್ತು. ಆಗ ನನಗೆ ಹೆಸರು ಗೊಂದಲವಾಗಿ, ಅವರ ಹೆಸರು ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್ ಎರಡರಲ್ಲಿ ಯಾವುದು ಎಂದು ಸ್ಪಷ್ಟ ಪಡಿಸುವಂತೆ ಕೇಳಿರುವುದಾಗಿ ತಿಳಿಸಿದರು.

ಊರಿಗೊಂದು ಹೆಸರು
ಸಿನಿಮಾದಲ್ಲಿ ಹೆಸರು ಬದಲಿಸುವಂತೆ ನಿಜ ಜೀವನದಲ್ಲೂ ಊರಿಗೊಂದು ಹೆಸರು ಇಟ್ಟುಕೊಂಡಿದ್ದಾರೆ. ಇದು ಸಾಧ್ಯವಾಗಲ್ಲ. ಮೇಟಿ ವಿಚಾರ ಸೇರಿದಂತೆ ಯಾರ ವೈಯಕ್ತಿಕ ವಿಚಾರಗಳನ್ನು ಎಳೆದು ತಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ಬಗ್ಗೆ ತೇಜಸ್ವಿ ಎಂಬುವವರು ಬರೆದಿದ್ದರು. ನಾನು ಅದನ್ನು ಷೇರ್ ಮಾಡಿದ್ದೇನೆ. ಅದು ನನ್ನ ಅಭಿಪ್ರಾಯವಲ್ಲ. ಹೀಗಾಗಿ ನನ್ನ ಮೇಲೆ ದಾವೆ ಹಾಕಲು ಬರುವುದಿಲ್ಲ. ನಾನು ಈಗಲೂ ಅವರ ಬಗ್ಗೆ ಮಾತನಾಡಲ್ಲ. ತಾರ್ಕಿಕವಾಗಿ ಮಾತನಾಡಿದ್ದೇನೆ ಅಷ್ಟೆ ಎಂದರು.

ಚುನಾವಣೆಗೆ ನಿಲ್ಲಲಿ, ಸೋಲಿಸಿ ಕಳಿಸುತ್ತೇನೆ
ಕೋರ್ಟ್ ವಿವರಣೆ ಕೇಳಿದರೆ ಕೊಡುತ್ತೇನೆ. ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಮತ ಹಾಕಬೇಡಿ ಎಂದು ಹೇಳುತ್ತಾರೆ. ಪ್ರಕಾಶ್ ರೈ ತಾವು ದೊಡ್ಡವರು ಎಂದುಕೊಂಡಿದ್ದರೆ ರಾಜ್ಯದ 224 ಕ್ಷೇತ್ರದ ಪೈಕಿ ಎಲ್ಲಾದರೂ ಬಂದು ಚುನಾವಣೆಗೆ ನಿಲ್ಲಲಿ. ಎಲ್ಲಿ ನಿಂತರೂ ಅವರನ್ನು ಸೋಲಿಸಿ ಕಳಿಸುತ್ತೇನೆ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು. ಪ್ರಕಾಶ್ ರೈ ಒಂದು ರುಪಾಯಿಗೆ ದಾವೆ ಹಾಕಿದರೆ ನನ್ನ ಮರ್ಯಾದೆ ಅಷ್ಟೇ ಅಂತಲ್ಲ ಎಂದು ಹೇಳಿದರು.

ವಾಚ್ ಕಿತ್ಕೊಂಡು ಬಂದ ಮುಖ್ಯಮಂತ್ರಿ
ಸಿದ್ದರಾಮಯ್ಯ ಆಯ್ಕೆಯಾಗಿ ಹನ್ನೊಂದು ತಿಂಗಳಲ್ಲೇ ಮೈಸೂರಿನಲ್ಲಿ ಜನ ನನ್ನನ್ನ ಗೆಲ್ಲಿಸಿದ್ದಾರೆ. ಅದು ನನ್ನ ಯೋಗ್ಯತೆ. ಯಾರೋ ಕಟ್ಟಿದ್ದ ವಾಚ್ ಕಿತ್ಕೊಂಡು ಬಂದವರು ಮುಖ್ಯಮಂತ್ರಿ. ಇಂತಹ ವ್ಯಕ್ತಿಗಳಿಗೆ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಭ್ರಷ್ಟರಿಗೆ ಕಾಲ ಇಲ್ಲ ಅನ್ನೋದು ಮೋದಿ ಸರಕಾರದಲ್ಲಿ ಗೊತ್ತಾಗಿದೆ. ಹೀಗಾಗಿಯೇ ನೀರವ್ ಮೋದಿ ದೇಶ ಬಿಟ್ಟಿದ್ದಾರೆ. ಬ್ಯಾಂಕ್ ಗೆ ನೀರವ್ ಮೋದಿ ಟೋಪಿ ಹಾಕಲು ಅಂದಿನ ಕಾಂಗ್ರೆಸ್ ಸರಕಾರವೇ ನೇರ ಕಾರಣ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಣ ಕಟ್ಟಲಾಗದೆ ದೇಶ ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಚಿದಂಬರಂ ಅವರನ್ನೇ ಕಟಕಟೆಯಲ್ಲಿ ನಿಲ್ಲಿಸಬೇಕು
ಕೇಂದ್ರದ ಸಚಿವ ಪಿ.ಚಿದಂಬರಂ ಮಗ ಕಾರ್ತಿಕ್ ಬಂಧನದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಹಳ ತಡವಾಗಿಯಾದರೂ ಭ್ರಷ್ಟರನ್ನು ಕಟಕಟೆಗೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ. ಚಿದಂಬರಂ ಮೂಲದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಕೊಡುವಾಗ ಅವರ ಮಗನನ್ನು ಅಲ್ಲ, ಚಿದಂಬರಂ ಅವರನ್ನೇ ಕಟಕಟೆಗೆ ತಂದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.












Click it and Unblock the Notifications