DK Shivakumar: 'ಈ ಬಂಡೆ ಸಿದ್ದರಾಮಯ್ಯ ಜೊತೆ ಇದೆ' - ದೋಸ್ತಿ ಒಳಗುಟ್ಟು ರಟ್ಟು ಮಾಡಿದ ಡಿಕೆ ಶಿವಕುಮಾರ್
ಮೈಸೂರು ಆಗಸ್ಟ್ 9: ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜನಾಂದೋಲನ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೈತ್ರಿ ದೋಸ್ತಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೈತ್ರಿ ಮಾಡಿಕೊಂಡ ಬಳಿಕ ಬಿಜೆಪಿ ಜೆಡಿಎಸ್ ನಾಯಕರು ಪರಸ್ಪರ ಹಿತ ನುಡಿಗಳನ್ನು ಆಡುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಇವರಾಡಿದ ಮಾತುಗಳನ್ನು ನೀವೆಲ್ಲಾ ಕೇಳಲೇ ಬೇಕು ಎಂದು ಡಿಕೆ ಶಿವಕುಮಾರ್ ಅವರು ವೇದಿಕೆ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪರಸ್ಪರ ಬೈದಾಡಿಕೊಂಡ ವಿಡಿಯೋಗಳನ್ನು ಪ್ರಸಾರ ಮಾಡಿದರು.
ಬಿಜೆಪಿ ಜೆಡಿಎಸ್ ನಾಯಕರ ವಿರುದ್ಧ ಇಂದು ಡಿಕೆ ಶಿವಕುಮಾರ್ ಅಬ್ಬರದ ಭಾಷಣ ಮಾಡಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಬಡ ಜನರಿಗಾಗಿ ಶ್ರಮಿಸಿದ್ದೇವೆ. ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದನ್ನು ಸಹಿಸಲಾಗದೆ ಸಿಎಂ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. ಮುಡಾ ಸೈಟ್ ಯಾರ ಆಡಳಿತದ ಅವಧಿಯಲ್ಲಿ ನೀಡಲಾಗಿದೆ? ಅದು ಬಿಜೆಪಿ ಅವರ ಆಡಳಿತದಲ್ಲೇ ಆಗಿದೆ. ಆಗ ಎಲ್ಲಿಗೆ ಹೋಗಿತ್ತು ಈ ಹಗರಣ ವಿಚಾರ? ಎಂದು ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ಇದೊಂದು ಸಿಎಂ ಸಿದ್ದರಾಮಯ್ಯ ಅವರನ್ನು ಸಿಕ್ಕಿ ಹಾಕಿಸುವ ಹುನ್ನಾರ. ಈ ಕನಕಪುರ ಬಂಡೆ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಇದೆ. ಬಂಡೆ ಜೊತೆ ಶಾಸಕರಿದ್ದಾರೆ. ಈ ಬಂಡೆ ಕಡೆದರೆ ಶಿಲೆ, ವಿರುದ್ಧ ನಿಂತುಕೊಂಡರೆ ನಾಶ ಎಂದು ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವೇಳೆ ದೋಸ್ತಿ ನಾಯಕರ ಪರಸ್ಪರ ವಾಗ್ದಾಳಿಯ ವಿಡಿಯೋವನ್ನು ವೇದಿಕೆಯಲ್ಲಿ ಪ್ರಸಾರ ಮಾಡಲಾಯಿತು. ಹಾಗಾದರೆ ಯಾರು? ಏನು ಹೇಳಿದರು.
ಜೆಡಿಎಸ್ ವಿರುದ್ಧ ಯಡಿಯೂರಪ್ಪ:- ಕುಮಾರಸ್ವಾಮಿ ನಂಬಿದವರನ್ನು ಮುಗಿಸುತ್ತಾರೆ. ಅವರು ಮಾಡಿದ ಹಗರಣವನ್ನು ಬಯಲು ಮಾಡಿದ್ದೇನೆ. ಮುಂದೆ ಮಾಡುತ್ತೇನೆ.
ವಿಜಯೇಂದ್ರ ವಿರುದ್ಧ ಯತ್ನಾಳ್- ವಿಜಯೇಂದ್ರ ಎಷ್ಟು ಕೊಳ್ಳೆ ಕೊಡೆದಿದ್ದಾರೆ ಅಂತ ಹೊರಬರಲಿ. ಬಿವೈ ವಿಜಯೇಂದ್ರ ಎಲ್ಲಾ ಕಡೆ ಹಸ್ತಕ್ಷೇಪ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಬಡವರ ಹಣ ತಿಂದಿದ್ದಾರೆ. ಇಂತಹ ಭ್ರಷ್ಟ ಕುಟುಂಬವನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರೆಸಬೇಕಾ? ವಿಜಯೇಂದ್ರ ಅಂದ್ರೆ ಭ್ರಷ್ಟಾಚಾರ. ಕೊರೊನಾ ಸಮಯದಲ್ಲಿ ಒಂದು ಮಾಸ್ಕ್‌ಗೆ 495 ರೂಪಾಯಿ, ಒಂದು ಬೆಡ್‌ಗೆ 20,000ರೂಪಾಯಿ ಹೀಗೆ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಅದೆಲ್ಲವೂ ಬಯಲಾಗಲಿ ಎಂದು ಯತ್ನಾಳ್ ಹೇಳಿರುವ ವಿಡಿಯೋ ಕ್ಲಿಪ್ ಪ್ರಸಾರ ಮಾಡಲಾಯಿತು.

ಜೆಡಿಎಸ್ ವಿರುದ್ಧ ಅಶ್ವತ್ಥನಾರಾಯಣ- ಕುಮಾರಸ್ವಾಮಿ ಎಲ್ಲೆಲ್ಲಿ ಏನೇನು ಮಾಡಿದಿಯಾ ಬಿಚ್ಚಪ್ಪ ಬಿಚ್ಚಪ್ಪ ಎಂದು ಹೇಳಿರುವ ವಿಡಿಯೋ ಕ್ಲಿಪ್ ಪ್ರಸಾರ ಮಾಡಲಾಯಿತು.
ಬಿಜೆಪಿ ವಿರುದ್ಧ ಕುಮಾರಸ್ವಾಮಿ- ಹತ್ತು ಪರ್ಸೆಂಟ್ ತಂದವರು ಯಡಿಯೂರಪ್ಪ ಅವರೇ. ಅಧಿಕಾರಕ್ಕೆ ಬಂದ ಮೇಲೆ ಪರ್ಸೆಂಟ್ ಪಿತಾಮಹಾ ನೀವೇ..
ಬಿಜೆಪಿ ವಿರುದ್ಧ ದೇವೇಗೌಡ- ಕಂಡೋರ ಆಸ್ತಿ ತಿನ್ನೋಕೆ ನನ್ನ ನನ್ನ ಅಪ್ಪ ಹುಟ್ಟಿಸಿಲ್ಲ.
ಬಿಜೆಪಿ ವಿರುದ್ಧ ಕುಮಾರಸ್ವಾಮಿ: ಬಿಜೆಪಿ ಅವರು ಪಾದಯಾತ್ರೆಗೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದರಿಂದ ನಮಗೆ ಬೇಸರ ಆಗಿದೆ. ಪಾದಯಾತ್ರೆಯಲ್ಲಿ ನಾನು ಭಾಗಿಯಾಗುವುದಿಲ್ಲ.
ಹೀಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪರಸ್ಪರ ಬೈದಾಡಿಕೊಂಡ ಆರೋಪ ಮಾಡಿಕೊಂಡ ವಿಡಿಯೋ ಕ್ಲಿಪ್‌ಗಳನ್ನು ಮೈಸೂರು ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಪ್ರಸಾರ ಮಾಡಲಾಯಿತು. ಹೀಗೆ ಹೇಳ್ತಾ ಹೋದರೆ ಬಿಜೆಪಿ ಜೆಡಿಎಸ್ ನಾಯಕರು ಪರಸ್ಪರ ಬೈದಾಡಿಕೊಂಡಿದ್ದು ಸುಮಾರು ಇದೆ. ಸಿಡಿ ಪೆನ್‌ಡ್ರೈವ್ ಬಗ್ಗೆ ಯಾರು ಏನೆಲ್ಲಾ ಮಾತನಾಡಿದ್ದರು ಅನ್ನೋದನ್ನು ಪ್ರಸಾರ ಮಾಡುತ್ತೇವೆ. ಇದನ್ನು ತೋರಿಸುತ್ತಾ ಹೋದರೆ ಇಡಿ ದಿನ ಆದರೂ ಸಾಕಾಗುವುದಿಲ್ಲ ಎಂದು ಡಿಕೆ ಶಿವಕುಮಾರ್ ದೋಸ್ತಿ ಮೈತ್ರಿ ವಿರುದ್ಧ ಕಿಡಿ ಕಾರಿ ತಮ್ಮ ಮಾತುಗಳನ್ನು ಮುಗಿಸಿದರು.












Click it and Unblock the Notifications