ಮೈಸೂರು ಸಾಮೂಹಿಕ ಅತ್ಯಾಚಾರ; ಬಸ್ ಟಿಕೆಟ್, ಬಿಯರ್ ಬಾಟಲಿ ಕೊಟ್ಟ ಸುಳಿವು
ಮೈಸೂರು, ಆಗಸ್ಟ್ 28: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಲ್ಲಣ ಸೃಷ್ಟಿಸಿದ್ದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ನಡೆದ 85 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಎಲ್ಲಾ ಆರೋಪಿಗಳನ್ನು ಮೈಸೂರಿಗೆ ಕರೆತಂದು ಅಜ್ಞಾತ ಸ್ಥಳದಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾಗಿದ್ದು, ಒಬ್ಬ ಚಾಮರಾಜನಗರದವನು ಎನ್ನಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ವಶಪಡಿಸಿಕೊಂಡ ಆರೋಪಿಗಳು ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿ ಸಮೀಪ ಘಟನೆ ನಡೆದಿದ್ದು, ನಾಲ್ಕು ದಿನಗಳ ನಂತರ ಕೊನೆಗೂ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಕೆಲವು ತಾಂತ್ರಿಕ ಸಾಕ್ಷಾಧಾರಗಳ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗೆ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿತ್ತು. ಸುಮಾರು ಎಂಬತ್ತು ಮಂದಿ ಈ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಹಲವು ಸಾಕ್ಷ್ಯಗಳು ಪೊಲೀಸರಿಗೆ ದೊರೆತಿದ್ದು, ಅವುಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ರಸ್ತೆ ದರೋಡೆಗೆ ಹೋಗಿದ್ದವರು ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. ಮೈಸೂರಿನ ಹಲವು ಅಪರಾಧಗಳಲ್ಲಿ ಈ ತಂಡ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.

ಘಟನೆ ನಡೆದ ಸ್ಥಳದಲ್ಲಿ 34 ಸಾಕ್ಷ್ಯಗಳು: ಸಾಮೂಹಿಕ ಅತ್ಯಾಚಾರ ನಡೆದ ಸ್ಥಳದಲ್ಲಿ ಪೊಲೀಸರಿಗೆ ಸುಮಾರು 34 ಸಾಕ್ಷ್ಯಗಳು ದೊರೆತಿದ್ದವು. ಅವುಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಸ್ಥಳದಲ್ಲಿ ಸಿಕ್ಕಿದ್ದ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಅದರ ಬಾರ್‌ಕೋಡ್‌ಗಳ ಪರಿಶೀಲನೆ ನಡೆಸಿ, ಮದ್ಯ ಖರೀದಿ ಮಾಡಿರುವ ಮದ್ಯದಂಗಡಿಗಳಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಇದರೊಂದಿಗೆ, ಘಟನೆ ನಡೆದ ಸ್ಥಳದಲ್ಲಿ ದೊರೆತಿದ್ದ ಬಸ್ ಟಿಕೆಟ್‌ಗಳು ಪೊಲೀಸರಿಗೆ ಮಹತ್ವದ ಸುಳಿವು ಕೊಟ್ಟಿದ್ದವು ಎನ್ನಲಾಗಿದೆ.
ಮೊಬೈಲ್ ಲೊಕೇಷನ್ ಪರಿಶೀಲನೆ:
ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅತ್ಯಾಚಾರ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಘಟನಾ ಸ್ಥಳದಲ್ಲಿ ಮೊಬೈಲ್ ಲೊಕೇಷನ್ ಪರಿಶೀಲನೆ ನಡೆಸಿದ್ದರು. ಆಗಸ್ಟ್ 24ರಂದು ಸಂಜೆ 6.30 ಇಂದ 7.30ರವರೆಗೆ ಘಟನೆ ನಡೆದ ಸುತ್ತಮುತ್ತಲ ಸ್ಥಳದ ಮೊಬೈಲ್ ನೆಟ್‌ವರ್ಕ್‌ಗಳನ್ನು ಪರಿಶೀಲಿಸಿದ್ದರು.
ಸ್ಥಳದಲ್ಲಿ ಸಿಕ್ಕಿದ್ದ ಬಿಯರ್ ಬಾಟಲಿ ಹಾಗೂ ತಾಳವಾಡಿಯ ಬಸ್ ಟಿಕೆಟ್ ಪೊಲೀಸರಿಗೆ ಸುಳಿವು ಕೊಟ್ಟಿದ್ದವು. ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಗಳು ಕೆಲವು ದಿನಗಳಿಂದ ಓಡಾಡುತ್ತಿದ್ದರು. ಯುವಕ ಯುವತಿಯನ್ನು ಮೂರು ದಿನಗಳಿಂದ ಗಮನಿಸುತ್ತಿದ್ದ ಇವರು ನಾಲ್ಕನೇ ದಿನ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಘಟನೆ: ಆಗಸ್ಟ್ 24ರಂದು ಈ ಘಟನೆ ನಡೆದಿತ್ತು. ಹೊರ ರಾಜ್ಯದಿಂದ ವ್ಯಾಸಂಗಕ್ಕೆ ಬಂದು ಖಾಸಗಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ಅಂದು ಸಂಜೆ 7.30ರ ವೇಳೆಗೆ ತನ್ನ ಗೆಳೆಯನೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ತೆರಳಿದ್ದಾಗ, ಹುಡುಗನ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಯ ಮೇಲೆ ಪಾನಮತ್ತರಾಗಿದ್ದ ಐದಾರು ಮಂದಿ ಯುವಕರ ತಂಡ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿದ್ದರು ಎನ್ನಲಾಗಿದೆ. ಆನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಪಿಗಳ ಬಂಧನಕ್ಕೆ ಹೆಚ್ಚಾದ ಒತ್ತಡ: ಸಾಮೂಹಿಕ ಅತ್ಯಾಚಾರ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಶೀಘ್ರವೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಗಾಗಬೇಕು ಎಂದು ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು. ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದರು. ಶನಿವಾರ ಬೆಳಿಗ್ಗೆ ಪೊಲೀಸರು 85 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯಕ್ಕೆ ಮೈಸೂರಿಗೆ ಆರೋಪಿಗಳನ್ನು ಕರೆತಂದಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ತನ್ನ ರಾಜ್ಯಕ್ಕೆ ವಾಪಸಾದ ವಿದ್ಯಾರ್ಥಿನಿ: ಪೊಲೀಸರು ಆರೋಪಿಗಳನ್ನು ಬಂಧಿಸಿ ಮೈಸೂರಿಗೆ ಕರೆತರುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಹಾಗೂ ಅವಳೊಂದಿಗೆ ಇದ್ದ ಪೋಷಕರು ತನ್ನ ರಾಜ್ಯಕ್ಕೆ ಮರಳಿದ್ದಾರೆ.












Click it and Unblock the Notifications