ಮೇ 15 ರಂದು ಏಷ್ಯನ್ ಪೇಂಟ್ಸ್ ವಿರುದ್ಧ ರೈತರ ಪ್ರತಿಭಟನೆ
ಮೈಸೂರು, ಮೇ 14:ನಂಜನಗೂಡು ತಾಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿರುವ ಏಷ್ಯನ್ ಪೇಂಟ್ಸ್ ಕಂಪನಿಯ ರೈತ ವಿರೋಧಿ ನಿಲುವಿನಿಂದ ಭೂಮಿ ಕಳೆದುಕೊಂಡಿರುವ ರೈತರು ಮೇ 15ರಂದು ನಾಳೆ ಕಂಪನಿ ಎದುರು ಧರಣಿ ನಡೆಸುವರು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಾಮೇಗೌಡ ವಿದ್ಯಾಸಾಗರ್ ತಿಳಿಸಿದರು.
ಇಮ್ಮಾವು ಗ್ರಾಮದ ರೈತರಿಗೆ ಕಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಏಷ್ಯನ್ ಪೇಂಟ್ಸ್ ಅತಿ ಕಡಿಮೆ ದರದಲ್ಲಿ ರೈತರಿಂದ ಭೂಮಿ ಪಡೆದುಕೊಂಡಿದೆ. ಆದರೆ, ಈಗ ರೈತರಿಗೆ ಉದ್ಯೋಗವನ್ನು ನೀಡದೆ ವಂಚಿಸುತ್ತಿದೆ. ರೈತರು ಶಿಕ್ಷಣ ಪಡೆದಿಲ್ಲ ಎಂದು ಕೆಳ ದರ್ಜೆಯ ಕೆಲಸಗಳನ್ನು ನೀಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

ಉದ್ಯೋಗ ನೀಡದೆ ಇದ್ದುದನ್ನು ಖಂಡಿಸಿ ಹಲವಾರು ಪ್ರತಿಭಟನೆಗಳು ನಡೆದಿವೆ. ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸುಮಾರು 20 ಸಭೆಗಳು ನಡೆದರೂ ಕಂಪನಿಯು ರೈತರಿಗೆ ಕಾಯಂ ಉದ್ಯೋಗ ನೀಡಲಿಲ್ಲ. ಮೇ 15ರಂದು ಬೆಳಗ್ಗೆ 10ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುತ್ತಿದೆ. ರೈತರೊಂದಿಗೆ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಯುವ ಸೇನೆ, ಮಹಿಳಾ ಸಂಘಟನೆಗಳು ವಿವಿಧ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಹೋರಾಟದಲ್ಲಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.












Click it and Unblock the Notifications