ಮೈಸೂರು ದಸರಾಕ್ಕೆ ಮುನ್ನುಡಿ ಬರೆಯಲಿರುವ ಗಜಪಯಣ: ಎಂದಿನಿಂದ ಆರಂಭ..?

ಮೈಸೂರು, ಆಗಸ್ಟ್‌ 20: ಆಷಾಢ ಕಳೆಯುತ್ತಿದ್ದಂತೆಯೇ ಎಲ್ಲರ ಚಿತ್ತ ದಸರಾದತ್ತ ಹರಿಯುವುದು ಸಾಮಾನ್ಯ. ಅದರಲ್ಲೂ ಈ ಬಾರಿ ಸಮೃದ್ಧ ಮಳೆಯಾಗಿರುವುದರಿಂದ ರೈತಾಪಿ ವರ್ಗದಿಂದ ಆರಂಭವಾಗಿ ಎಲ್ಲರೂ ನೆಮ್ಮದಿಯುಸಿರು ಬಿಡುವಂತಾಗಿದ್ದು, ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ಸರ್ವಜನ ಮುಂದಿನ ದಿನಗಳಲ್ಲಿ ಮೈಕೊಡವಿಕೊಂಡು ದಸರಾವನ್ನು ಸ್ವಾಗತಿಸುವತ್ತ ಚಿತ್ತಹರಿಸುತ್ತಿದ್ದು, ಎಲ್ಲರ ಮೊಗದಲ್ಲೂ ಸಂತಸ ಮನೆ ಮಾಡಲಾರಂಭಿಸಿದೆ.

ಮೈಸೂರು ದಸರಾದ ಮುನ್ನುಡಿಯೇ ಗಜಪಯಣವಾಗಿರುವುದರಿಂದ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ಸಿಕ್ಕಿತೆಂದರೆ ಮೈಸೂರು ದಸರಾದ ಸಿದ್ಧತೆ ಆರಂಭವಾಯಿತೆಂದೇ ಅರ್ಥ. ಐತಿಹಾಸಿಕ ದಸರಾದಂದು ನಡೆಯುವ ಜಂಬೂಸವಾರಿಯ ಪ್ರಮುಖ ಅಂಗವಾಗಿರುವ ಗಜಪಡೆ ಎರಡು ತಿಂಗಳಿರುವಾಗಲೇ ಮೈಸೂರು ನಗರಕ್ಕೆ ಬರುವುದು ಸಂಪ್ರದಾಯ. ಗಜಪಡೆ ನಗರ ಪ್ರವೇಶ ಮಾಡುತ್ತಿದ್ದಂತೆಯೇ ದಸರಾ ಕಳೆ ನಗರವನ್ನು ವ್ಯಾಪಿಸಲಾರಂಭಿಸುತ್ತದೆ.

Mysuru Dasara 2024 Mysore Dasara First Step Gajapayana Start From August 21st

ಈ ಬಾರಿ ನಾಗರಹೊಳೆ ಅಭಯಾರಣ್ಯದಂಚಿನ ವೀರನಹೊಸಹಳ್ಳಿಯಲ್ಲಿ ಆ.21ರ ಬುಧವಾರ ಬೆಳಗ್ಗೆ 10.20ರಿಂದ 10.45ರ ತುಲಾ ಶುಭ ಲಗ್ನದಲ್ಲಿ ಗಜಪೂಜೆ ನಡೆಸುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಬಳಿಕ ಅಲ್ಲಿಂದ ಹೊರಡಲಿರುವ ಗಜಪಡೆ ಮೈಸೂರು ನಗರದ ಅರಣ್ಯ ಭವನದಲ್ಲಿ ಉಳಿದುಕೊಳ್ಳಲಿದೆ.

ಬಳಿಕ ಗಜಪಡೆಯನ್ನು ಆ.23ರಂದು ಶುಕ್ರವಾರ ಬೆಳಗ್ಗೆ ಅರಮನೆಗೆ ಕರೆತರಲಾಗುತ್ತದೆ. ಈ ಸಂದರ್ಭ ವಿಶೇಷ ಪೂಜೆ ನೆರವೇರಿಸುವ ಮೂಲಕ ಅರಮನೆಗೆ ಆನೆಗಳನ್ನು ಬರ ಮಾಡಿಕೊಳ್ಳಲಾಗುತ್ತದೆ. ಆ.24ರಂದು ಬೆಳಗ್ಗೆ ಆನೆಗಳಿಗೆ ತೂಕ ಪರೀಕ್ಷೆ ನಡೆಯಲಿದ್ದು, ಇದಕ್ಕಿಂತ ಮುಂಚಿತವಾಗಿ ಎಲ್ಲಾ ಆನೆಗಳಿಗೂ ಒಣ ತಾಲೀಮು ನಡೆಸಲಾಗುತ್ತದೆ.

ಗಜಪಯಣದ ಮೊದಲ ತಂಡದಲ್ಲಿ 9 ಆನೆಗಳು

ಗಜಪಯಣದ ಮೊದಲ ತಂಡದಲ್ಲಿ 9 ಆನೆಗಳಿದ್ದು, ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಭೀಮ, ಗೋಪಿ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮೀ ಮತ್ತು ಲಕ್ಷ್ಮೀ ಆನೆಗಳಿದ್ದು, ಉಳಿದ 5 ಆನೆಗಳನ್ನು 10 ದಿನಗಳ ಬಳಿಕ 2 ತಂಡದಲ್ಲಿ ಕರೆತಂದು ತಾಲೀಮು ನಡೆಸಲಾಗುತ್ತದೆ. ಇದರೊಂದಿಗೆ ಆನೆಗಳೊಂದಿಗೆ ಆಗಮಿಸುವ ಮಾವುತ, ಕಾವಾಡಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ 18 ಶೆಡ್ಗಳನ್ನು ನಿರ್ಮಾಣ ಮಾಡಲಾಗಿದೆ. ಎರಡನೇ ತಂಡದ ಆನೆಗಳೊಂದಿಗೆ ಬರುವ ಮಾವುತ ಮತ್ತು ಕಾವಾಡಿ ಹಾಗೂ ಅವರ ಕುಟುಂಬದವರಿಗೆ ಶೆಡ್ ನಿರ್ಮಿಸುವ ಕಾರ್ಯ ನಡೆಯಲಿದ್ದು, ಆನೆಗಳೊಂದಿಗೆ ಬರುವ ಮಕ್ಕಳ ಓದಿಗೆ ಸಮಸ್ಯೆಯಾಗದಂತೆ ಟೆಂಟ್ ಶಾಲೆ ತೆರಯಲಾಗುತ್ತಿದ್ದು, ಅದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

Mysuru Dasara 2024 Mysore Dasara First Step Gajapayana Start From August 21st

ಇನ್ನು ಗಜಪಯಣದ ಕಾರ್ಯಕ್ರಮ ಹೇಗೆ ನಡೆಯಲಿದೆ ಎಂಬುದನ್ನು ನೋಡುವುದಾದರೆ ಆ.21ರಂದು ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿದ್ಯುಕ್ತ ಚಾಲನೆ ನೀಡಲಿದ್ದು, ಇದೇ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ದಸರಾದಲ್ಲಿ ಭಾಗವಹಿಸುತ್ತಿರುವ ಆನೆಗಳ ಕಿರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಸಚಿವ ಕೆ.ವೆಂಕಟೇಶ್, ಶಿವರಾಜ್ ಸಂಗಪ್ಪ ತಂಗಡಿಗಿ, ಶಾಸಕರಾದ ಅನೀಲ್ ಚಿಕ್ಕಮಾದು, ರಮೇಶ್ ಬಂಡಿಸಿzಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧಕ್ಷೆ ಡಾ.ಪುಷ್ಪಾ ಅಮರನಾಥ್, ಮುಖ್ಯ ಅತಿಥಿಗಳಾಗಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧಕ್ಷತೆಯನ್ನು ಶಾಸಕ ಜಿ.ಡಿ.ಹರೀಶ್ಗೌಡ ವಹಿಸಲಿದ್ದಾರೆ.

ಮೈಸೂರಿಗೆ ಬರಲಿದೆ ದಸರಾ ಕಳೆ

ಗಜಪಡೆಗೆ ಪುಚ್ಪಾರ್ಚನೆ ಮತ್ತು ಪೂಜಾ ಕಾರ್ಯಕ್ರಮದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಹಾಡಿ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಆನೆ ಮಾವುತರು, ಕಾವಾಡಿಗರಿಗೆ ಸನ್ಮಾನ ಮಾಡಲಾಗುತ್ತದೆಯಲ್ಲದೆ, ಸ್ಥಳೀಯ ಕಲಾವಿದರು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಈಗಾಗಲೇ ಘೋಷಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ದಸರಾ ಚಟುವಟಿಕೆ ವೇಗಪಡೆದುಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+