ಗಜಪಡೆಯೇ ಮೈಸೂರು ದಸರಾದ ಸೂತ್ರಧಾರಿಗಳು..ಹೇಗೆ ಗೊತ್ತಾ?
ಮೈಸೂರು, ಸೆಪ್ಟೆಂಬರ್ 19: ಮೈಸೂರು ದಸರಾದಲ್ಲಿ ಗಜಪಡೆಗಳದ್ದೇ ಕಾರುಬಾರು.... ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಲ್ಲಿ ಕ್ಯಾಪ್ಟನ್ ಅಭಿಮನ್ಯು ನಡೆಯುತ್ತಿದ್ದರೆ, ಅವನ ಅಕ್ಕ ಪಕ್ಕ ಮತ್ತು ಮುಂದೆ ಇತರೆ ಗಜಪಡೆ ಸರ್ವ ಅಲಂಕಾರ ಭೂಷಿತರಾಗಿ ಹೆಜ್ಜೆ ಹಾಕುತ್ತವೆ. ಇದನ್ನು ನೋಡಲೆಂದೇ ವರ್ಷದಿಂದ ಕಾಯುತ್ತಿದ್ದ ಲಕ್ಷಾಂತರ ಕಣ್ಣುಗಳು ಆ ದಿನ ಹತ್ತಿರದಿಂದ ನೋಡಿ ಧನ್ಯವಾಗುತ್ತವೆ. ಆದರೆ ಆ ಒಂದು ದಿನ ನಡೆಯುವ ಜಂಬೂಸವಾರಿಗಾಗಿ ಅದರ ಹಿಂದೆ ಸಾವಿರಾರು ಕಾಣದ ಕೈಗಳು ತಿಂಗಳಾನುಗಟ್ಟಲೆ ಕೆಲಸ ಮಾಡಿ ಯಶಸ್ವಿಗೊಳಿಸುತ್ತವೆ.
ಇನ್ನು ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯೇ ಜಂಬೂಸವಾರಿ ಹೀಗಾಗಿ ಅದನ್ನು ಯಶಸ್ವಿಗೊಳಿಸಲು ಗಜಪಡೆಯನ್ನು ಸುಮಾರು ಎರಡು ತಿಂಗಳ ಕಾಲ ತಾಲೀಮು ನಡೆಸಿ ಸಜ್ಜುಗೊಳಿಸಲಾಗುತ್ತದೆ. ಇದು ಅಷ್ಟು ಸುಲಭದ ಕೆಲಸವಂತು ಅಲ್ಲವೇ ಅಲ್ಲ. ಇದು ಅರಣ್ಯಾಧಿಕಾರಿಗಳು, ಸಿಬ್ಬಂದಿ, ಮಾವುತರು ಮತ್ತು ಕಾವಾಡಿಗಳಿಗೆ ಸವಾಲಿನ ಕೆಲಸವೇ ಆದರೆ ಗಜಪಡೆಗೆ ಕಠಿಣ ತಾಲೀಮು ನಡೆಸಿ ಸರ್ವಸಜ್ಜುಗೊಳಿಸುವ ಕೆಲಸವನ್ನು ಮಾಡುತ್ತಾರೆ.

ಆ ಒಂದು ದಿನದ ಜಂಬೂಸವಾರಿಗಾಗಿ ವಿವಿಧ ಆನೆ ಶಿಬಿರಗಳಿಂದ ಎರಡು ತಂಡವಾಗಿ ಮೈಸೂರಿಗೆ ಆಗಮಿಸುವ ಗಜಪಡೆಯಲ್ಲಿರುವ ಸಾಕಾನೆಗಳಿಗೆ ಹೊತ್ತಿಗೆ ಸರಿಯಾಗಿ ಪೌಷ್ಠಿಕ ಆಹಾರಗಳನ್ನು ನೀಡಿ, ಸ್ನಾನ ಮಾಡಿಸಿ ಮಾವುತರು ಮತ್ತು ಕಾವಾಡಿಗಳು ಆರೈಕೆ ಮಾಡುತ್ತಾರೆ. ಕಾಡಿನಿಂದ ಬಂದು ನಾಡಿನ ವಾತಾವರಣಕ್ಕೆ ಒಗ್ಗಿಸಿ ಸದ್ದು ಗದ್ದಲಗಳಿಗೆ ಬೆದರದಂತೆ ಮಾಡುವ ಮೂಲಕ ಸರ್ವ ರೀತಿಯಲ್ಲಿಯೂ ಸಜ್ಜು ಗೊಳಿಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಶ್ರಮ ಮಾವುತ ಮತ್ತು ಕಾವಾಡಿಗರದ್ದಾಗಿರುತ್ತದೆ.
ಪ್ರತಿದಿನವೂ 14 ಆನೆಗಳಿಗೆ ಕಠಿಣ ತಾಲೀಮು
ಮೈಸೂರಿನ ಅರಮನೆ ಆವರಣದಲ್ಲಿ ಬೀಡು ಬಿಡುವ ಈ ಗಜಪಡೆಗಳಿಗೆ ದಿನನಿತ್ಯ ವಿವಿಧ ಬಗೆಯ ಬೂರಿ ಭೋಜನ ಅದರಲ್ಲೂ ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅಭಿಮನ್ಯುಗೆ ವಿಶೇಷ ಸತ್ಕಾರಗಳು ನಡೆಯುತ್ತಿವೆ. ಉದ್ದು. ಗೋಧಿ, ಕುಸುಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ, ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಉಚ್ಚೆಳ್ಳು ಮೊದಲಾದ ಸೈಡ್ ಐಟಂಗಳೊಂದಿಗೆ ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ್ಗೆ ನೀಡಲಾಗುತ್ತಿದೆ. ದಿನಕ್ಕೆರಡು ಬಾರಿ ಪೈಪಿನಲ್ಲಿ ನೀರು ಹಾಯಿಸಿ ಸ್ನಾನ ಮಾಡಿಸಲಾಗುತ್ತಿದೆ.

ಜಂಬೂ ಸವಾರಿ ದಿನ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಅಭಿಮನ್ಯುಗೆ ಸುಮಾರು 750 ಕೆ.ಜಿ. ತೂಕದ ಮರದ ಅಂಬಾರಿಯನ್ನು, ಉಳಿದ ಆನೆಗಳಿಗೆ ಮರಳಿನ ಮೂಟೆ(ಗಾದಿ ಹಮ್ದಾ)ಯನ್ನು ಕಟ್ಟಿ ದಿನಕ್ಕೆರಡು ಬಾರಿ ತಾಲೀಮು ನಡೆಯುತ್ತದೆ. ಅರಮನೆ ಆವರಣದಿಂದ ಆರಂಭವಾಗುವ ಈ ತಾಲೀಮು ಸುಮಾರು 6ಕಿ.ಮೀ. ರಷ್ಟು ದೂರವಿರುವ ಬನ್ನಿಮಂಟಪದವರೆಗೆ ಸಾಗುತ್ತದೆ. ಈ ಬಾರಿ ಎಲ್ಲ ಹದಿನಾಲ್ಕು ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡು ಹೆಜ್ಜೆ ಹಾಕುತ್ತಿವೆ. ಇದು ನೆಮ್ಮದಿ ತಂದಿದೆ.
ಜಂಬೂಸವಾರಿಯ ಸೂತ್ರಧಾರಿ ಗಜಪಡೆಗೆ ಸಲಾಂ
ಒಣ ತಾಲೀಮಿನೊಂದಿಗೆ ಆರಂಭವಾದ ಗಜಪಡೆಯ ತಾಲೀಮು ಬಳಿಕ ಭಾರ ಹೊರುವ, ಇದೀಗ ಅಂತಿಮ ಘಟ್ಟದ ಮರದ ಅಂಬಾರಿ ತಾಲೀಮಿಗೆ ಬಂದು ನಿಂತಿದೆ. ಇದರ ಜತೆಗೆ ಸಿಡಿಮದ್ದಿನ ತಾಲೀಮು ನಡೆಯಲಿದೆ. ಇದೆಲ್ಲವೂ ಮುಗಿಯುತ್ತಿದ್ದಂತೆಯೇ ನವರಾತ್ರಿ ಆರಂಭವಾಗಲಿದೆ. ಆ ನಂತರ ವಿದ್ಯುದ್ದೀಪದ ಬೆಳಕಿನಲ್ಲಿ ತಾಲೀಮು ನಡೆಯಲಿದೆ. ಇದೀಗ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ 14 ಸಾಕಾನೆಗಳು ಯಶಸ್ವಿಯಾಗಿ ತಾಲೀಮು ನಡೆಸುತ್ತಿವೆ.

ಅಭಿಮನ್ಯು ಜೊತೆಗೆ ಹಿರಣ್ಯಾ ಮತ್ತು ಲಕ್ಷ್ಮಿ ಅಕ್ಕಪಕ್ಕದಲ್ಲಿ ಹೆಜ್ಜೆಹಾಕಿದರೆ, ಅವುಗಳೊಂದಿಗೆ ಮಹೇಂದ್ರ, ಧನಂಜಯ, ಭೀಮ, ಪ್ರಶಾಂತ, ಗೋಪಿ, ಕಂಜನ್, ಸುಗ್ರೀವ, ರೋಹಿತ, ಏಕಲವ್ಯ, ದೊಡ್ಡಹರವೆ ಲಕ್ಷ್ಮಿ, ವರಲಕ್ಷ್ಮಿಆನೆಗಳು ಅವುಗಳೊಂದಿಗೆ ಹೆಜ್ಜೆಹಾಕುತ್ತಾ ಸಾಥ್ ನೀಡುತ್ತಿವೆ. ಅದು ಏನೇ ಇರಲಿ ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ಜಂಬೂಸವಾರಿ ಆಗಿರುವುದರಿಂದ ಅದರ ಸೂತ್ರಧಾರಿಗಳಾದ ಗಜಪಡೆಗೆ ಸಲಾಂ ಎನ್ನಲೇ ಬೇಕಾಗುತ್ತದೆ.












Click it and Unblock the Notifications